ಕಾರು ಚಲಾಯಿಸುವಾಗ ಉಸಿರಾಟ ಸಮಸ್ಯೆಯಿಂದ ತೊಂದರೆಗೆ ಒಳಗಾದ ಸಾಫ್ಟ್ವೇರ್ ಕಂಪನಿ ಮಹಿಳಾ ಉದ್ಯೋಗಿಯ ಪ್ರಾಣವನ್ನು ಮಡಿವಾಳ ಸಂಚಾರ ಠಾಣೆ ಹೆಡ್ ಕಾನ್ಸ್ಟೇಬಲ್ವೊಬ್ಬರು ರಕ್ಷಿಸಿದ್ದಾರೆ.
ಮಾರತ್ತಹಳ್ಳಿ ನಿವಾಸಿ ಕಲಿಂದಿ ಶ್ರೀವಾಸ್ತವ್ ಪ್ರಾಣಪಾಯದಿಂದ ಪಾರಾದವರು. ಕೆಲಸ ಮುಗಿಸಿಕೊಂಡು ಅವರು ಮನೆಗೆ ಮರಳುವಾಗ ಮಾರ್ಗ ಮಧ್ಯೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ತೊಂದರೆಗೆ ಸಿಲುಕಿದ್ದ ಅವರಿಗೆ ಹೆಡ್ ಕಾನ್ಸ್ಟೇಬಲ್ ವೈ.ಟಿ.ದತ್ತಾತ್ರೇಯ ನೆರವಾಗಿದ್ದಾರೆ.
ಕಚೇರಿ ಕೆಲಸ ಮುಗಿಸಿ ಕಾರು ಚಲಾಯಿಸಿಕೊಂಡು ಮಹಿಳೆ ಮನೆಗೆ ಹೊರಟ್ಟಿದ್ದರು. ಮಾರ್ಗ ಮಧ್ಯೆ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪ ಅವರಿಗೆ ಉಸಿರಾಟ ಸಮಸ್ಯೆಯುಂಟಾಗಿದೆ. ಆ ಜಂಕ್ಷನ್ನಲ್ಲಿ ಮಡಿವಾಳ ಸಂಚಾರ ಠಾಣೆ ಹೆಚ್ಸಿ ದತ್ತಾತ್ರೇಯ ಕಾರ್ಯನಿರ್ವಹಿಸುತ್ತಿದ್ದರು. ಕಾರಿನಲ್ಲಿ ಮಹಿಳೆ ಕೈ ಸನ್ನೆ ಮಾಡಿ ರಕ್ಷಣೆಗೆ ಕರೆಯುತ್ತಿರುವುದನ್ನು ಗಮನಿಸಿದ ದತ್ತಾತ್ರೇಯ ತಕ್ಷಣ ಕಾರಿನ ಬಗೆ ತೆರಳಿ ನೆರವಾಗಿದ್ದಾರೆ.
ಕಾರಿಗೆ ಹ್ಯಾಂಡ್ ಬ್ರೇಕ್ ಹಾಕಿ ನಿಲ್ಲಿಸಿಕಾರನ್ನು ಚಲಾಯಿಸಿಕೊಂಡು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿಷಯವನ್ನು ಇನ್ಸ್ಪೆಕ್ಟರ್ ಈಶ್ವರಿ ಅವರಿಗೆ ದತ್ತಾತ್ರೇಯ ತಿಳಿಸಿ, ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಬೇರೆ ಆಸ್ಪತ್ರೆಗೆ ಪೊಲೀಸರು ದಾಖಲಿಸಿಬ ಸಂತ್ರಸ್ತೆಯ ಪತಿಗೆ ಮಾಹಿತಿ ನೀಡಿದ್ದಾರೆ.


