Saturday, November 21, 2026
Menu

ಕೋಮು ಸಾಮರಸ್ಯಕ್ಕೆ ಧಕ್ಕೆ ಆರೋಪ: ಪ್ರತಾಪ್ ಸಿಂಹ ಪ್ರಕರಣ ರದ್ದುಪಡಿಸಲು ನ್ಯಾಯಾಲಯ ನಕಾರ

ಉದಯಕಾಲ ನ್ಯೂಸ್, ಬೆಂಗಳೂರು: ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಮತ್ತು ಎಫ್‌ಐಆರ್ ರದ್ದುಪಡಿಸಲು ಹಾಗೂ ತನಿಖೆಗೆ ತಡೆ ನೀಡಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಇದೇ ವೇಳೆ, ಪ್ರಕರಣದ ಇತರ ಮೂವರು ಆರೋಪಿಗಳಿಗೆ ನ್ಯಾಯಾಲಯವು ಬಿಗ್ ರಿಲೀಫ್ ನೀಡಿದೆ.

ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠದಿಂದ ಮಹತ್ವದ ಆದೇಶ

ಶಹಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ (ಕ್ರೈಂ ನಂ. 212/2024) ರದ್ದುಗೊಳಿಸುವಂತೆ ಕೋರಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ (Criminal Petition No. 200381 of 2025) ವಿಚಾರಣೆಯನ್ನು ಹೈಕೋರ್ಟ್‌ನ ಕಲಬುರಗಿ ಪೀಠದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು.

ವಿಚಾರಣೆ ವೇಳೆ ದೂರಿನಲ್ಲಿರುವ ಅಂಶಗಳು ಮತ್ತು ಪ್ರತಾಪ್ ಸಿಂಹ ಅವರ ಭಾಷಣದ ನಿರ್ದಿಷ್ಟ ಭಾಗಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಪೀಠವು, ದೂರಿನ ವಿವರಗಳು ಹಾಗೂ ಅರ್ಜಿದಾರರ ಭಾಷಣದ ಅಂಶಗಳನ್ನು ಗಮನಿಸಿದರೆ, ಗಲಭೆಯನ್ನು ಪ್ರಚೋದಿಸುವ ಮತ್ತು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರತಕ್ಕಂತಹ ಆರೋಪಗಳ ಕುರಿತು ಪ್ರತಾಪ್ ಸಿಂಹ ಅವರ ವಿರುದ್ಧ ಸಮಗ್ರ ತನಿಖೆ ನಡೆಸುವ ಅಗತ್ಯವನ್ನು ಈ ಪ್ರಕರಣ ಸೂಚಿಸುತ್ತದೆ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಭಾಷಣದ ಬಳಿಕ ಯಾವುದೇ ಗಲಭೆ ನಡೆದಿಲ್ಲದಿದ್ದರೂ, ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 192ರ ಎರಡನೇ ಭಾಗ ಹಾಗೂ ಕಲಂ 299ರ ಅಡಿಯಲ್ಲಿ ಅಪರಾಧದ ಪ್ರಾಥಮಿಕ ಅಂಶಗಳು ಕಂಡುಬರುವುದರಿಂದ ತನಿಖೆ ಮುಂದುವರಿಯಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಮೂವರು ಇತರ ಆರೋಪಿಗಳಿಗೆ ನಿರಾಳ

ಮತ್ತೊಂದೆಡೆ, ಪ್ರತಾಪ್ ಸಿಂಹ ಅವರ ಪ್ರಚೋದನಕಾರಿ ಹೇಳಿಕೆಗೆ ಪ್ರೇರಣೆ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಪ್ರಕರಣದ ಇತರ ಮೂವರು ಆರೋಪಿಗಳಾದ ಕರಣ್ ಸಿ. ಸುಬೇದಾರ್, ಶಿವಕುಮಾರ್ ಮತ್ತು ಗುರುರಾಜ ಅವರ ವಿರುದ್ಧದ ತನಿಖೆ ಹಾಗೂ ವಿಚಾರಣೆಯನ್ನು ನ್ಯಾಯಪೀಠ ಇದೇ ವೇಳೆ ರದ್ದುಪಡಿಸಿ ಆದೇಶಿಸಿದೆ. ಈ ಮೂವರು ಕಾರ್ಯಕ್ರಮದ ಆಯೋಜಕರಾಗಿದ್ದು, ಪ್ರತಾಪ್ ಸಿಂಹ ಅವರ ಭಾಷಣಕ್ಕೆ ಇವರು ಪ್ರಚೋದನೆ ನೀಡಿದ್ದಾರೆ ಎಂಬುದಕ್ಕೆ ದೂರಿನಲ್ಲಿ ಯಾವುದೇ ನಿರ್ದಿಷ್ಟ ಆರೋಪಗಳು ಅಥವಾ ಸಾಕ್ಷ್ಯಾಧಾರಗಳು ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಅವರಿಗೆ ಪ್ರಕರಣದಿಂದ ಮುಕ್ತಿ ನೀಡಿದೆ.

ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಭಾಷಣ

2024ರ ಸೆಪ್ಟೆಂಬರ್ 21ರಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಗಣೇಶ ವಿಸರ್ಜನೆಯ ದಿನ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅವರು, ಹಿಂದೂ ಧಾರ್ಮಿಕ ಮೆರವಣಿಗೆಗಳ ಮೇಲೆ ಏಕೆ ಕಲ್ಲುಗಳನ್ನು ತೂರಲಾಗುತ್ತದೆ? ಈದ್ ಮಿಲಾದ್ ಮೆರವಣಿಗೆಗಳ ಸಂದರ್ಭದಲ್ಲಿ ಹಿಂದೂಗಳು ಕಲ್ಲು ತೂರಿರುವ ಒಂದಾದರೂ ನಿದರ್ಶನವನ್ನು ತೋರಿಸಿ. ದೇಶದ ಜನಸಂಖ್ಯೆಯಲ್ಲಿ ಶೇ. 80ರಷ್ಟು ಹಿಂದೂಗಳೇ ಇದ್ದಾರೆ. ಒಂದು ವೇಳೆ ಅವರೂ ಕೈಗೆ ಕಲ್ಲುಗಳನ್ನು ಎತ್ತಿಕೊಂಡರೆ ಏನಾಗಬಹುದು? ಎಂದು ಪ್ರಶ್ನಿಸಿದ್ದರು.

ಪ್ರತಾಪ್ ಸಿಂಹ ಅವರ ಈ ಹೇಳಿಕೆಯು ಸಮಾಜದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಿದ್ದು, ಎರಡು ಧರ್ಮಗಳ ನಡುವೆ ದ್ವೇಷ ಮತ್ತು ಗಲಭೆಗೆ ಪ್ರಚೋದನೆ ನೀಡುವಂತಿದೆ ಎಂದು ಆರೋಪಿಸಿ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಪೊಲೀಸರು ಪ್ರತಾಪ್ ಸಿಂಹ ಮತ್ತು ಆಯೋಜಕರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ-2023ರ (BNS) ಕಲಂ 299 (ಧಾರ್ಮಿಕ ಭಾವನೆಗಳಿಗೆ ಉದ್ದೇಶಪೂರ್ವಕ ಧಕ್ಕೆ) ಮತ್ತು ಕಲಂ 192 (ಗಲಭೆಗೆ ಪ್ರಚೋದನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರತಾಪ್ ಸಿಂಹ ಅವರಿಗೆ ಇದೀಗ ತೀವ್ರ ಹಿನ್ನಡೆಯಾಗಿದ್ದು, ಪೊಲೀಸರ ತನಿಖೆಯನ್ನು ಎದುರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.
#PratapSimha #HateSpeechCase #KarnatakaHighCourt #Shahapur #YadgirNews #BJP #BNS #KalaburagiBench #KarnatakaNews #UdayakalaNews

Related Posts

Leave a Reply

Your email address will not be published. Required fields are marked *