Saturday, November 21, 2026
Menu

ಪೊಲೀಸ್ ಠಾಣೆ ರಿಯಲ್ ಎಸ್ಟೇಟ್ ದಂಧೆ ಕೇಂದ್ರವಾಗಬಾರದು: ಪೊಲೀಸರಿಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್!

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಮುಂದಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಗರದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆಗಳನ್ನು ನೀಡಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಯಾವುದೇ ಕಾರಣಕ್ಕೂ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶ ನೀಡಬಾರದು. ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಅಧಿಕಾರಿಗಳೆಲ್ಲರೂ ‘ಟೀಂ ಬೆಂಗಳೂರು’ ಆಗಿ ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಿಎಂ ಸೂಚಿಸಿದ್ದಾರೆ.

1.5 ಕೋಟಿ ಜನಸಂಖ್ಯೆಗೆ 5 ಪೊಲೀಸ್ ಕಮಿಷನರೇಟ್‌ಗಳ ಬಲ

ವಿಧಾನಸೌಧದ ನವೀಕೃತ ಸಭಾಂಗಣ ಸಂಗಮದಲ್ಲಿ ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, “ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪೊಲೀಸ್ ಕಮಿಷನರ್ ಕಚೇರಿ ಪ್ರಾರಂಭಿಸಿದಾಗ ನಗರದ ಜನಸಂಖ್ಯೆ ಕೇವಲ 20 ಲಕ್ಷ ಇತ್ತು. ಇದೀಗ ಬೆಂಗಳೂರಿನ ಜನಸಂಖ್ಯೆ ಸುಮಾರು 1.5 ಕೋಟಿ ತಲುಪಿದೆ. ಇಷ್ಟು ದೊಡ್ಡ ನಗರದ ಕಾನೂನು ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವ ಉದ್ದೇಶದಿಂದ ಚೀಫ್ ಕಮಿಷನರ್ ಅವರ ಅಡಿಯಲ್ಲಿ ಐದು ಪ್ರತ್ಯೇಕ ಪೊಲೀಸ್ ಕಮಿಷನರೇಟ್‌ಗಳನ್ನು ಸ್ಥಾಪಿಸಿದ್ದೇವೆ. ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡಿರುವುದರ ಜೊತೆಗೆ ನೂರಾರು ಹೊಸ ಹುದ್ದೆಗಳನ್ನು ಸೃಷ್ಟಿಸಿ ಪೊಲೀಸ್ ಇಲಾಖೆಯನ್ನು ಬಲಪಡಿಸಲಾಗಿದೆ. ಬಿಬಿಎಂಪಿಯನ್ನು ವಿಭಜಿಸಿ ಜಿಬಿಎ (GBA) ಮಾಡಿದಾಗ ಆರಂಭದಲ್ಲಿ ಕೆಲ ಅಪಸ್ವರಗಳಿದ್ದವು, ಆದರೆ ಈಗ ಅದು ಯಶಸ್ವಿಯಾಗಿದೆ. ಅದೇ ಮಾದರಿಯಲ್ಲಿ ಐದು ಕಮಿಷನರೇಟ್‌ಗಳೂ ಅತ್ಯುತ್ತಮವಾಗಿ ಕೆಲಸ ಮಾಡಬೇಕು” ಎಂದರು.

ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಇಮೇಜ್ ಹಾಗೂ ಟ್ರಾಫಿಕ್ ಸವಾಲು

ಇಡೀ ದೇಶ ಮತ್ತು ಜಗತ್ತು ಇಂದು ಬೆಂಗಳೂರಿನತ್ತ ನೋಡುತ್ತಿದೆ. ನಗರದಲ್ಲಿ ಸುಮಾರು 2 ಲಕ್ಷ ವಿದೇಶಿ ನಾಗರಿಕರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕೆಲವೊಮ್ಮೆ ಜಾಗತಿಕ ಸುದ್ದಿಯಾಗುತ್ತದೆ. ನಮ್ಮ ಮೇಲೆ ನಿರೀಕ್ಷೆಯ ಒತ್ತಡ ಹೆಚ್ಚಿರುವುದರಿಂದ ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯೂ ಹೆಚ್ಚಿದೆ. ಕಾರ್ಯದಕ್ಷತೆಯ ಮಾನದಂಡದ ಮೇಲೆ ನಿಮ್ಮನ್ನು ನೇಮಕ ಮಾಡಲಾಗಿದ್ದು, ಹಿಂದಿನ ತಪ್ಪುಗಳಿಂದ ಬೇಗನೆ ಪಾಠ ಕಲಿತು ಸರ್ಕಾರಕ್ಕೆ ಉತ್ತಮ ಹೆಸರು ತರುವಂತೆ ಕೆಲಸ ಮಾಡಬೇಕು ಎಂದು ಸಿಎಂ ಕಿವಿಮಾತು ಹೇಳಿದರು.

ರೌಡಿಗಳಲ್ಲಿ ಭಯವಿರಲಿ, ಡ್ರಗ್ಸ್ ವಸೂಲಿ ಪೊಲೀಸರಿಗೆ ಕಠಿಣ ಶಿಕ್ಷೆ

ನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ಮಟ್ಟಹಾಕುವ ಕುರಿತು ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಸಿಎಂ ಡಿ.ಕೆ. ಶಿವಕುಮಾರ್, ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಗೌರವವಿರಬೇಕು ಮತ್ತು ರೌಡಿಗಳಲ್ಲಿ ಖಾಕಿ ಬಟ್ಟೆಯ ಬಗ್ಗೆ ಭಯವಿರಬೇಕು. ರೌಡಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲು ಎಡಿಜಿಪಿ ಹಂತದ ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ಪ್ರತ್ಯೇಕ ರೌಡಿ ದಳ ಹಾಗೂ ಕಮಿಷನರೇಟ್ ಸ್ಥಾಪಿಸಲಾಗಿದೆ. ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಮಾದಕ ವಸ್ತುಗಳ ದಂಧೆಯಲ್ಲಿ ಶಾಮೀಲಾಗಿ ವಸೂಲಿಗೆ ಇಳಿಯುವ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸೈಬರ್ ಕ್ರೈಂ, ಸುಳ್ಳು ಸುದ್ದಿ ನಿಯಂತ್ರಣ ಹಾಗೂ 1 ತಿಂಗಳ ಗಡುವು

ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡುವವರು ಮತ್ತು ದ್ವೇಷ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸೈಬರ್ ಅಪರಾಧ ಮತ್ತು ಆನ್‌ಲೈನ್ ವಂಚನೆಗಳನ್ನು ತಡೆಯಲು ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹಿರಿಯ ಅಧಿಕಾರಿಗಳು ನಿರಂತರವಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು ಹಾಗೂ ರಾತ್ರಿ ಗಸ್ತು ಹೆಚ್ಚಿಸಬೇಕು. ಮುಂದಿನ ಒಂದು ತಿಂಗಳಲ್ಲಿ ರಾಜ್ಯದ ಜನತೆಗೆ ಕಾಣುವಂತಹ ಉತ್ತಮ ಫಲಿತಾಂಶ ನೀಡಬೇಕು ಎಂದು ಸಿಎಂ ಅಧಿಕಾರಿಗಳಿಗೆ ಗಡುವು ನೀಡಿದರು.

ಬೆಂಗಳೂರು ಭ್ರಷ್ಟಾಚಾರ ಮುಕ್ತ ನಗರವಾಗಬೇಕು; ಜಾತಿ ಸಂಘರ್ಷಕ್ಕೆ ಪ್ರಚೋದನೆ ಬೇಡ

ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು,ನಗರದಲ್ಲಿ ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ ಇರಬೇಕು. ಕೆಳಹಂತದವರೆಗೂ ಯಾವುದೇ ಪ್ರಭಾವ ಅಥವಾ ಸಂಬಂಧಗಳಿಗೆ ಮಣಿದು ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಹಿರಿಯ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು. ಇದೇ ವೇಳೆ ಬಸವಣ್ಣನವರ ಕೃತಿ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಬಸವಣ್ಣನವರ ವಿಚಾರದಲ್ಲಿ ಜಾತಿ-ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಯಾರೂ ಮಾಡಬಾರದು. ಈ ಬಗ್ಗೆ ಉಪಮುಖ್ಯಮಂತ್ರಿಗಳು ಈಗಾಗಲೇ ಸಚಿವ ಸಂಪುಟ ಸಭೆಯ ತೀರ್ಮಾನವನ್ನು ಸ್ಪಷ್ಟಪಡಿಸಿದ್ದು, ಸರ್ಕಾರ ಯಾವುದೇ ಸಮುದಾಯದ ವಿರುದ್ಧವೂ ನಡೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
#CMDKShivakumar #BengaluruPolice #TeamBengaluru #LawAndOrder #DrugFreeKarnataka #ZeroToleranceCorruption #RealEstateMafia #BengaluruNews #KarnatakaGovernment #UdayakalaNews

Related Posts

Leave a Reply

Your email address will not be published. Required fields are marked *