Menu

ಚುನಾವಣೆ ಇವಿಎಂ ಮುಕ್ತಗೊಳಿಸಿ, ಎಸ್‌ಐ ಆರ್‌ ರದ್ದುಗೊಳಿಸಲು ಸುಪ್ರೀಂಗೆ ಐಎನ್‌ಡಿಐಎ ಪತ್ರ

ಮುಂದಿನ ಚುನಾವಣೆಗಳನ್ನು ಇವಿಎಂ ಮುಕ್ತಗೊಳಿಸಿ ಬ್ಯಾಲೆಟ್‌ ಪೇಪರ್‌ಗಳಲ್ಲಿ ನಡೆಸಬೇಕು ಮತ್ತು ಚುನಾವಣಾ ಆಯೋಗ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ
ಪ್ರತಿಪಕ್ಷಗಳ ಐಎನ್‌ಡಿಐಎ ಮೈತ್ರಿಕೂಟ ಸುಪ್ರೀಂಕೋರ್ಟ್‌ಗೆ ಪತ್ರ ಬರೆದಿದೆ.

ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಆಡಳಿತದಲ್ಲಿ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆಯಿಂದ ದೇಶದ ಚುನಾವಣಾ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕೇಂದ್ರ ಸರಕಾರವು ಗುಪ್ತ ಕಾರ್ಯಸೂಚಿ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಐಎನ್‌ಡಿಐಎ ಮೈತ್ರಿಕೂಟ ಕಳವಳ ವ್ಯಕ್ತಪಡಿಸಿದ್ದು, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪತ್ರ ಬರೆದಿದ್ದಾರೆ.

ಎಸ್‌ಐಆರ್‌ ಕೂಡಲೇ ರದ್ದುಗೊಳಿಸಬೇಕು, ಮತದಾನಕ್ಕೆ ಇವಿಎಂ ಬದಲು ಮತಪತ್ರ ವ್ಯವಸ್ಥೆ ಮರು ಸ್ಥಾಪಿಸಬೇಕು ಎಂದು ಕೋರಿ ಐಎನ್‌ಡಿಐಎ ಮೈತ್ರಿಕೂಟದ 24 ಪಕ್ಷಗಳ ನಾಯಕರು ಸಹಿ ಮಾಡಿದ ಪತ್ರವನ್ನು ರಾಜ್ಯಸಭೆ ಸದಸ್ಯ ಕಪಿಲ್‌ ಸಿಬಲ್‌ ಮೂಲಕ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ಗೆ ಅವರಿಗೆ ಕಳುಹಿಸಲಾಗಿದೆ.

ಸಾಂವಿಧಾನಿಕ ಸಂಸ್ಥೆಗಳ ಮೇಲಿನ ದಬ್ಬಾಳಿಕೆ ಮುಂದುವರಿಸಲು ಅವಕಾಶ ನೀಡಿದರೆ ಭವಿಷ್ಯದಲ್ಲಿ ಚುನಾವಣಾ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಲಿದೆ. ಸರಕಾರದ ಕಾರ್ಯಸೂಚಿ ಜಾರಿಗೊಳಿಸಲು ಬಿಟ್ಟರೆ ಸಂಸದೀಯ ಪ್ರಜಾತಂತ್ರ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಮೈತ್ರಿಕೂಟ ಕಳವಳ ವ್ಯಕ್ತಪಡಿಸಿದೆ.

ಪತ್ರದ ಸಾರಾಂಶವನ್ನು ಮಾಧ್ಯಮಗಳಿಗೆ ಬಿಡುಗಡೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್‌, ಮೋದಿ-ಶಾ ಆಡಳಿತದಲ್ಲಿ ದೇಶದ ಚುನಾವಣಾ ಪ್ರಜಾಪ್ರಭುತ್ವ ವ್ಯವಸ್ಥೆ ಗಂಭೀರ ಅಪಾಯದಲ್ಲಿದೆ. ಸಾಂವಿಧಾನಿಕ ಸಂಸ್ಥೆಗಳಲ್ಲಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬೇಕಿದೆ. ಚುನಾವಣಾ ಆಯೋಗವನ್ನು ಸರಿದಾರಿಗೆ ತರಲು ನ್ಯಾಯಾಂಗ ವ್ಯವಸ್ಥೆ ದೃಢ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗ ನಡೆಸುತ್ತಿರುವ ಏಕಪಕ್ಷೀಯ ಎಸ್‌ಐಆರ್‌ ಪ್ರಕ್ರಿಯೆ ಮೂಲಕ ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಜನರ ಮತದಾನದ ಹಕ್ಕು ಕಸಿದುಕೊಳ್ಳಲಾಗಿದೆ. ಬಿಜೆಪಿ ಪರವಾಗಿ ಕಾರ್ಯ ನಿರ್ವಹಿಸಿದ ಆಯೋಗದ ಕ್ರಮದಿಂದ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಸ್‌ಐಆರ್‌ ಕೈಗೊಳ್ಳದಂತೆ ಆಯೋಗವನ್ನು ನಿಯಂತ್ರಿಸಬೇಕು, ಚುನಾವಣೆಯ ಐದು ವರ್ಷದ ಮೊದಲು ಎಸ್‌ಐಆರ್‌ ಪೂರ್ಣಗೊಳಿಸಲು ನಿರ್ದೇಶನ ನೀಡಬೇಕು. ಮುಂದಿನ ಚುನಾವಣೆಗಳನ್ನು ಬ್ಯಾಲೆಟ್‌ ಪೇಪರ್‌ ಮೂಲಕ ನಡೆಸಲು ಸೂಚಿಸಬೇಕು, ಚುನಾವಣಾ ಪ್ರಕ್ರಿಯೆಯ ಸಮಗ್ರತೆ, ವಿಶ್ವಾಸಾರ್ಹತೆ ಮರುಸ್ಥಾಪಿಲು ನ್ಯಾಯಾಂಗ ಕ್ರಮ ವಹಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

Related Posts

Leave a Reply

Your email address will not be published. Required fields are marked *