Menu

ಶ್ರೀಮಂತರೊಂದಿಗೆ ಸ್ನೇಹದ ನಾಟಕವಾಡಿ ಹಣ ವಂಚಿಸುತ್ತಿದ್ದ ಮಹಿಳೆ ಅರೆಸ್ಟ್‌

ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತರನ್ನು ಪರಿಚಯಿಸಿಕೊಂಡ ಬಳಿಕ ಸ್ನೇಹದ ನಾಟಕವಾಡಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಕಿರುತೆರೆ ನಟಿ ವನಿತಾ ಎಂಬಾಕೆಯನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಸಾಮಾಜಿಕ ಜಾಲತಾಣಗಳಲ್ಲಿ ತಾನು ಕಿರುತೆರೆ ನಟಿ ಎಂದು ಪರಿಚಯ ಮಾಡಿಕೊಂಡು ಹಣವಂತರೆಂದು ಖಚಿತಪಡಿಸಿಕೊಂಡ ಬಳಿಕ ಅವರೊಂದಿಗೆ ಸಲುಗೆಯಿಂದ ನಿರಂತರವಾಗಿ ಸಂಪರ್ಕದಲ್ಲಿದ್ದು, ನಂಬಿಕೆ ಹುಟ್ಟಿಸಿ ಹಣ ವಂಚಿಸುತ್ತಿದ್ದಳು ಎನ್ನಲಾಗಿದೆ.

ತಾನು ತುಂಬ ತೊಂದರೆಯಲ್ಲಿದ್ದೇನೆ ಎಂದು ನಂಬಿಸುತ್ತಿದ್ದ ಆರೋಪಿ, ನನ್ನ ಚಿನ್ನ ಅಡವಿಟ್ಟಿದ್ದೇನೆ, ಬಿಡಿಸಿಕೊಳ್ಳಲು ತುರ್ತಾಗಿ ಹಣ ಬೇಕಾಗಿದೆ. ಎರಡರಿಂದ ಮೂರು ದಿನಗಳಲ್ಲಿ ಸಾಲದ ಹಣ ವಾಪಸ್ ನೀಡುತ್ತೇನೆ ಎಂದು ನಂಬಿಸಿ ಹಣ ಪಡೆಯುತ್ತಿದ್ದಳು. ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಜಾಗಗಳನ್ನು ಹುಡುಕಿ ಅಲ್ಲಿಗೆ ಹಣ ನೀಡುವವರನ್ನು ಕರೆಸಿಕೊಂಡು ನಗದು ಪಡೆದು ಪರಾರಿಯಾಗುತ್ತಿದ್ದಳು.

ಒಮ್ಮೆ ಹಣ ಪಡೆದುಕೊಂಡರೆ ಹಣ ಕೊಟ್ಟವರು ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಮೆಸೇಜ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದೇ ರೀತಿ ನಂಬಿ ಹಣ ಕಳೆದುಕೊಂಡ ಯುವಕ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಗೋವಿಂದರಾಜನಗರ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಗಳಲ್ಲೂ ಈಕೆಯ ವಿರುದ್ಧ ಈ ಹಿಂದೆ ದೂರುಗಳು ದಾಖಲಾಗಿದ್ದವು.

ಪ್ರಕರಣ ಗಂಭೀರವಾಗಿ ಪರಿಗಣಿಸಿದ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ತನಿಖೆ ನಡೆಸಿ, ಆರೋಪಿ ವನಿತಾಳನ್ನು ಬಂಧಿಸಿದ್ದಾರೆ. ಈಕೆಯ ವಂಚೆನಗೆ ಒಳಗಾಗಿರುವ ಹಲವು ಸಂತ್ರಸ್ತರ ಬಗ್ಗೆ ಪೊಲೀಸರು ಮಾಹಿತಿ ಸಂಗರಹಿಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *