ಚುನಾವಣೆಗಳಲ್ಲಿ ಗೆದ್ದ ಕೂಡಲೇ ಗೆದ್ದ ಪಾರ್ಟಿಯ ಬಾಲವನ್ನು ಹಿಡಿದು ಮುಂದೆ ಸಾಗುವ ಜನಪ್ರತಿನಿಧಿಗಳಿಗೆ ಈ ದೇಶದ ಮತದಾರರು ಖಂಡಿತವಾಗಿಯೂ ಪಾಠ ಕಲಿಸಬೇಕಿದೆ. ತಾವು ಗೆದ್ದು ಬಂದ ಪಾರ್ಟಿಯನ್ನೇ ಮೂಲೆಗೆ ತಳ್ಳಿ ಹಣ ಮತ್ತು ಅಧಿಕಾರದ ಆಮಿಷಗಳಿಗೆ ಜೋತು ಬೀಳುವ ಪ್ರತಿನಿಧಿಗಳ ವಿರುದ್ಧ ಮತದಾರರೇ ಬಂಡೇಳುವ ಸಾಮೂಹಿಕ ಪ್ರಜಾ ಚಳವಳಿ ಇಂದು ಅನಿವಾರ್ಯ.
ದೇಶಕ್ಕಿಂದು ಸಮರ್ಥ ಪ್ರತಿಪಕ್ಷಗಳ ಅಗತ್ಯ ಬಹಳಷ್ಟಿದೆ. ಆಡಳಿತಾರೂಢ ಪಕ್ಷಕ್ಕೆ ಇದು ಬೇಕಿಲ್ಲದ ಪಕ್ಷ ಆಗಿರಬಗುದೇನೋ. ಆದರೆ ನಿಜವಾದ ಮತ್ತು ಸತ್ವಪೂರ್ಣ ಪ್ರಜಾತಂತ್ರ ಬೆಳೆಯಲು ಶಕ್ತಿಯುತ ಪ್ರತಿಪಕ್ಷ ಅನಿವಾರ್ಯ. ಪ್ರಜಾಸತ್ತೆಯಲ್ಲಿ ಆಡಳಿತ ಪಕ್ಷಕ್ಕೆ ಇರುವಂತಹ ಹೊಣೆಗಾರಿಕೆ ಮತ್ತು ಹಕ್ಕು ಪ್ರತಿಪಕ್ಷಕ್ಕೂ ಉಂಟು. ಆದರೆ ದೇಶದ ಇಂದಿನ ರಾಜಕಾರಣ ಮತ್ತು ರಾಜಕೀಯ ಸನ್ನಿವೇಶಗಳನ್ನು ಕಂಡಾಗ ಮುಂದಿನ ದಿನಗಳಲ್ಲಿ ಪ್ರತಿಪಕ್ಷಗಳ ಅಸ್ತಿತ್ವದ ಬಗ್ಗೆ ಆತಂಕ ಮೂಡುತ್ತದೆ. ಪಕ್ಷೆವೊಂದರಿಂದ ಸಂಸತ್ ಅಥವಾ ವಿಧಾನಸಭೆಗೆ ಆಯ್ಕೆಯಾದ ಸಂಸದರು ಮತ್ತು ಶಾಸಕರನ್ನು ಸಾರಾಸಗಟಾಗಿ ಖರೀದಿಸುವ ದಮನಕಾರಿ ಪ್ರವೃತ್ತಿ ಆಡಳಿತ ಪಕ್ಷಗಳಿಂದ ಬಲವಾಗಿ ಮುಂದುವರಿದಿದೆ. ಇದು ದೌರ್ಭಾಗ್ಯಕರ ಸಂಗತಿ.
ಪಕ್ಷ, ನಿಷ್ಠೆ ಮತ್ತು ಮೌಲ್ಯಗಳು ಕುಸಿಯುತ್ತಿವೆ. ಶತಾಯ ಗತಾಯ ಲೋಕಸಭೆಯಲ್ಲಿ ತನ್ನ ಬಹುಮತವನ್ನು ಹೆಚ್ಚಿಸಿಕೊಳ್ಳಬೇಕೆಂಬ ಹಪಾಹಪಿ ಈಗ ಬಿಜೆಪಿಯಲ್ಲಿ ದ್ವಿಗುಣಗೊಂಡಿದೆ . ಐದು ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ ಜನತೆಯ ಮುಂದೆ ಹೋಗಿ ಚುನಾವಣೆಯಲ್ಲಿ ಗೆದ್ದು ಬರುವುದು ಮೌಲಿಕ ಪ್ರಜಾತಂತ್ರ. ಆದರೆ ಕೆಲವೊಂದು ಪಕ್ಷಗಳಿಂದ ಶಾಸನಸಭೆಗಳಿಗೆ ಗೆದ್ದು ಬಂದ ಶಾಸಕರು ಮತ್ತು ಸಂಸದರನ್ನು ಖರೀದಿಸುವ ವಾಮಮಾರ್ಗಕ್ಕೆ ಬಿಜೆಪಿ ಕುಮ್ಮಕ್ಕು ನೀಡುತ್ತಿರುವುದು ಆತಂಕಕಾರಿ.
ಗೆದ್ದ ಕೂಡಲೇ ಗೆದ್ದೆತ್ತಿನ ಬಾಲವನ್ನು ಹಿಡಿದು ಮುಂದೆ ಸಾಗುವ ಜನಪ್ರತಿನಿಧಿಗಳಿಗೆ ಮತದಾರರು ಖಂಡಿತವಾಗಿಯೂ ಪಾಠ ಕಲಿಸಬೇಕಿದೆ. ತಾವು ಗೆದ್ದು ಬಂದ ಪಾರ್ಟಿಯನ್ನೇ ಮೂಲೆಗೆ ತಳ್ಳಿ ಹಣ ಮತ್ತು ಅಧಿಕಾರದ ಆಮಿಷಗಳಿಗೆ ಜೋತು ಬೀಳುವ ಪ್ರತಿನಿಧಿಗಳ ವಿರುದ್ಧ ಮತದಾರರೇ ಬಂಡೇಳುವ ಸಾಮೂಹಿಕ ಪ್ರಜಾ ಚಳವಳಿ ಇಂದು ಅನಿವಾರ್ಯ. ತೃಣಮೂಲ ಕಾಂಗ್ರೆಸ್ ಎನ್ಸಿಪಿ, ಶಿವಸೇನೆ ಮೊದಲಾದ ಪಾರ್ಟಿಗಳಿಂದ ಗೆದ್ದು ಬಂದ ಸಂಸದರನ್ನು ತನ್ನತ್ತ ತಿರುಗಿಸಿಕೊಂಡರೆ, ಲೋಕಸಭೆಯಲ್ಲಿ ತಾನು ಅಂದುಕೊಂಡ ವಿಧೇಯಕಗಳನ್ನು ಸುಗಮವಾಗಿ ಅನುಮೋದಿಸಿ ಶಾಸನ ರಚಿಸಲು ಸಾಧ್ಯ ಎಂಬುದು ಬಿಜೆಪಿ ತಂತ್ರ. ಇಂತಹ ಆಶಯವೇ ದೋಷಪೂರಿತ.
ಬಹುಮತ ಎಂಬುದನ್ನು ಆಡಳಿತಾರೂಢ ಪಕ್ಷಗಳು ಹೇಗೆ ಪಡೆದುಕೊಳ್ಳಬೇಕು? ಪ್ರಜಾತಂತ್ರದ ನಿಜವಾದ ಮೌಲ್ಯಗಳಿಗೆ ಧಕ್ಕೆ ತರುವಂತಹ ಮಾರ್ಗಗಳ ಮೂಲಕ ಪಡೆಯುವ ಬಹುಮತ ಮೌಲ್ಯಯುತ ಬಹಿಮತವೇ ? ಈ ಪ್ರಶ್ನೆಗಳಿಂದು ಈ ದೇಶದ ಮುಂದಿದೆ. ಸಂಸದರು ಮತ್ತು ಶಾಸಕರನ್ನು ಅನರ್ಹತೆಗೊಳಿಸುವ ಅಧಿಕಾರ ಲೋಕಸಭೆ ಅಥವಾ ಅಸೆಂಬ್ಲಿ ಸ್ಪೀಕರ್ಗೆ ಇದೆಯೇ ಎಂಬ ಕಾನೂನಿನ ಜಿಜ್ಞಾಸೆಗೆ ಸುಪ್ರೀಂಕೋರ್ಟ್ನಿಂದ ಇನ್ನೂ ಅಂತಿಮ ತೀರ್ಮಾನ ಪ್ರಕಟವಾಗಿಲ್ಲ. ಇದೇ ವೇಳೆ ತಾಂತ್ರಿಕವಾಗಿ ಪಕ್ಷಾಂತರವನ್ನೇ ಹೋಲುವ ಅತೃಪ್ತ ಶಾಸಕರು ಮತ್ತು ಸಂಸದರ ನಡೆಗೆ ಕಾನೂನಿನಲ್ಲಿ ಅವಕಾಶವಿದ್ದು ಇದಕ್ಕಿಂದು ದೇಶದ ಸರ್ವೋಚ್ಛ ನ್ಯಾಯಪೀಠದ ತೀರ್ಪು ಕೂಡಾ ಅಗತ್ಯವಿದೆ. ಪಕ್ಷಾಂತರ ನಿಷೇಧ ಕಾಯಿದೆ ದಶಕಗಳ ಹಿಂದೆಯೇ ಜಾರಿಗೆ ಬಂದಿದ್ದರೂ, ಇದು ಸ್ವಾರ್ಥ ಜನಪ್ರತಿನಿಧಿಗಳು ಪಕ್ಷದ್ರೋಹ ಎಸಗಿ ಆಡಳಿತಾರೂಢ ಪಕ್ಷದತ್ತ ವಾಲುವ ಪ್ರಕ್ರಿಯೆಗಳಿಗೆ ಬಿಗಿ ಕಡಿವಾಣ ಹಾಕುವಂತಹ ಕೋರ್ಟ್ ತೀರ್ಪುಗಳ ಅನಿವಾರ್ಯತೆ ಇದೆ.


