ಉದಯಕಾಲ ನ್ಯೂಸ್, ಹಾಸನ: ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕಾಡಾನೆಗಳ ದಾಳಿಯ ಸರಣಿ ಮುಂದುವರಿದಿದ್ದು, ಜನತೆಯಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶ ಮೂಡಿಸಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಕಾಡಾನೆಗಳ ತುಳಿತಕ್ಕೆ ಮತ್ತೊಬ್ಬ ಅಮಾಯಕ ವ್ಯಕ್ತಿ ಬಲಿಯಾಗಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿಯಿಂದ ಬೇಸತ್ತ ಗ್ರಾಮಸ್ಥರು ಮತ್ತು ಕಾಫಿ ಬೆಳೆಗಾರರು ಸರ್ಕಾರದ ವಿರುದ್ಧ ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮೂರು ದಿನಗಳಲ್ಲಿ ಇಬ್ಬರ ಸಾವು: ಆಸ್ಪತ್ರೆ ಎದುರು ಜನಾಕ್ರೋಶ
ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೇನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹಫೀಜುರ್ ರೆಹಮಾನ್ (57) ಎಂಬುವವರ ಮೇಲೆ ಏಕಾಏಕಿ ದಾಳಿ ಮಾಡಿದ ಕಾಡಾನೆ, ಅವರನ್ನು ಕಾಲಿನಿಂದ ತುಳಿದು ಕ್ರೂರವಾಗಿ ಹತ್ಯೆ ಮಾಡಿದೆ. ಕಳೆದ ಶನಿವಾರವಷ್ಟೇ ಚೌಡನಹಳ್ಳಿ ಗ್ರಾಮದ ಜಯಮ್ಮ ಎಂಬ ಮಹಿಳೆ ಕೂಡ ಇದೇ ರೀತಿ ಆನೆ ದಾಳಿಗೆ ಬಲಿಯಾಗಿದ್ದರು. ಆ ಘಟನೆಯ ಬೆನ್ನಲ್ಲೇ ಇಂದು ಮತ್ತೊಬ್ಬರು ಜೀವ ಕಳೆದುಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮೃತನ ದೇಹವನ್ನು ಬೇಲೂರು ತಾಲೂಕು ಆಸ್ಪತ್ರೆಗೆ ರವಾನಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಗ್ರಾಮಸ್ಥರು, ರೈತ ಸಂಘದ ಕಾರ್ಯಕರ್ತರು ಆಸ್ಪತ್ರೆಗೆ ಅಂಬುಲೆನ್ಸ್ ಒಳಹೋಗದಂತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಮೃತದೇಹವನ್ನು ನೇರವಾಗಿ ಘಟನಾ ಸ್ಥಳಕ್ಕೇ ತೆಗೆದುಕೊಂಡು ಹೋಗಬೇಕು ಎಂದು ಪಟ್ಟು ಹಿಡಿದು ಆಸ್ಪತ್ರೆ ಮುಂಭಾಗ ತೀವ್ರ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ಮತ್ತು ಅರಣ್ಯ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ: ಪಿಎಸ್ಐಗೆ ಗಾಯ
ಸ್ಥಳದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ, ನೂಕಾಟ ಹಾಗೂ ತೀವ್ರ ವಾಗ್ವಾದ ನಡೆಯಿತು. ಪ್ರತಿಭಟನಾಕಾರರನ್ನು ಚದುರಿಸುವ ಯತ್ನದ ವೇಳೆ ಅರೇಹಳ್ಳಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಯೋಗಭರಂ ಅವರ ಕೈಗೆ ಗಾಯವಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕಳೆದ ಶನಿವಾರ ಜಯಮ್ಮ ಸಾವಿನ ನಂತರವೂ ಸಾರ್ವಜನಿಕರ ಪ್ರತಿಭಟನೆ ನಡೆದಿತ್ತು. ಆಗ ಎಚ್ಚೆತ್ತ ಸಿಸಿಎಫ್ ಏಡುಕುಂಡಲ ಅವರು ಬೇಲೂರು ಭಾಗದ ಎಲ್ಲಾ ಕಾಡಾನೆಗಳನ್ನು ಭದ್ರ ಅರಣ್ಯಕ್ಕೆ ಓಡಿಸುವುದಾಗಿ ಭರವಸೆ ನೀಡಿ, ಕಾರ್ಯಾಚರಣೆಗಾಗಿ ಕುಮ್ಕಿ ಆನೆಗಳು ಕೂಡ ಆಗಮಿಸಬೇಕಿತ್ತು. ಆದರೆ, ಆನೆಗಳನ್ನು ಸ್ಥಳಾಂತರಿಸುವ ಕಾರ್ಯ ಆರಂಭವಾಗುವಷ್ಟರಲ್ಲಿ ಮತ್ತೊಂದು ಸಾವು ಸಂಭವಿಸಿರುವುದು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಶಾಶ್ವತ ಪರಿಹಾರ ಸಿಗುವವರೆಗೆ ಮೃತದೇಹವನ್ನು ಸಾಗಿಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ.
#HassanNews #Belur #WildElephantAttack #ElephantMenace #Udayakala #KarnatakaNews #Protest #ForestDepartment


