ಉದಯಕಾಲ ನ್ಯೂಸ್, ಮಂಡ್ಯ: ಸಕ್ಕರೆ ನಾಡು ಮಂಡ್ಯದ ರೈತರ ಜೀವನಾಡಿಯಾಗಿರುವ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನ ಕಬ್ಬು ಅರೆಯುವಿಕೆಯನ್ನು ದಿಢೀರ್ ಸ್ಥಗಿತಗೊಳಿಸಿದೆ. ಮುಂದಿನ ಹಂಗಾಮಿನ ತನಕ ಕಾರ್ಖಾನೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಆಡಳಿತ ಮಂಡಳಿ ಘೋಷಿಸಿರುವುದು ಲಕ್ಷಾಂತರ ಕಬ್ಬು ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ಹಾಗೂ ಆತಂಕಕ್ಕೀಡು ಮಾಡಿದೆ. ಕಾರ್ಖಾನೆಯ ಜತೆ ಒಪ್ಪಂದ ಮಾಡಿಕೊಂಡಿದ್ದ ಕಬ್ಬಿನ ಪೈಕಿ ಅರ್ಧದಷ್ಟನ್ನೂ ನುರಿಸುವ ಮುನ್ನವೇ ಕದ ಮುಚ್ಚಿರುವುದು ಮಂಡ್ಯದ ರೈತರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.
ಒಪ್ಪಂದದ ಅರ್ಧ ಕಬ್ಬು ಬಾಕಿ: ಬಾಯ್ಲಿಂಗ್ ಹೌಸ್ ಕಾಮಗಾರಿ ನೆಪ
ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಮೈಶುಗರ್ ಕಾರ್ಖಾನೆಯು ಒಟ್ಟು 4.60 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆಯುವುದಾಗಿ ರೈತರೊಂದಿಗೆ ಅಧಿಕೃತ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಇಲ್ಲಿಯವರೆಗೆ ಕೇವಲ 2.10 ಲಕ್ಷ ಟನ್ ಕಬ್ಬನ್ನು ಮಾತ್ರ ನುರಿಸಲಾಗಿದೆ. ಅಂದರೆ, ಒಪ್ಪಂದದ ಪ್ರಕಾರ ಇನ್ನೂ ಅರ್ಧಕ್ಕಿಂತ ಹೆಚ್ಚು ಅಂದರೆ ಸುಮಾರು 2.50 ಲಕ್ಷ ಟನ್ ಕಬ್ಬು ಇನ್ನೂ ರೈತರ ಹೊಲಗಳಲ್ಲೇ ಕಟಾವಿಗೆ ಕಾಯುತ್ತಾ ನಿಂತಿದೆ.
ಕಾರ್ಖಾನೆಯಲ್ಲಿ ‘ಬಾಯ್ಲಿಂಗ್ ಹೌಸ್’ ನಿರ್ಮಾಣ ಮತ್ತು ನವೀಕರಣ ಕಾಮಗಾರಿ ಕೈಗೊಳ್ಳಬೇಕಿರುವ ಕಾರಣ ನೀಡಿ ಕಬ್ಬು ಅರೆಯುವಿಕೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಸರ್ಕಾರದ ಮತ್ತು ಕಾರ್ಖಾನೆಯ ಆಡಳಿತ ಮಂಡಳಿಯ ಈ ಧೋರಣೆ ಕೇವಲ ನಿರ್ಲಕ್ಷ್ಯ ಹಾಗೂ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ರೈತ ಮುಖಂಡರು ತೀವ್ರವಾಗಿ ಆಕ್ಷೇಪಿಸಿದ್ದಾರೆ.
ತಾಂತ್ರಿಕ ದೋಷ ಹಾಗೂ ಕಾರ್ಮಿಕರ ಕೊರತೆ: ಖಾಸಗಿ ಕಾರ್ಖಾನೆಗಳ ಮೇಲಿನ ಅವಲಂಬನೆ
ಮೈಶುಗರ್ ಕಾರ್ಖಾನೆಯಲ್ಲಿ ಪದೇಪದೆ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿರುವುದು ಮತ್ತು ಹಳೇ ಯಂತ್ರೋಪಕರಣಗಳು ಕೈಕೊಡುತ್ತಿರುವುದು ಈ ದುಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಪದೇಪದೆ ಕಾರ್ಯ ಸ್ಥಗಿತಗೊಂಡಿದ್ದರಿಂದ ಕೆಲಸದಲ್ಲಿ ವಿಳಂಬವಾಯಿತು. ಇದರಿಂದ ಬೇಸತ್ತ ಕಬ್ಬು ಕಟಾವು ಮಾಡುವ ನೂರಾರು ಕಾರ್ಮಿಕರು ಈಗಾಗಲೇ ತಮ್ಮ ಸ್ವಗ್ರಾಮಗಳಿಗೆ ವಾಪಸಾಗಿದ್ದಾರೆ. ಕಾರ್ಮಿಕರ ಕೊರತೆಯಿಂದಾಗಿ ಹೊಲಗಳಲ್ಲಿರುವ ಕಬ್ಬನ್ನು ಕಟಾವು ಮಾಡಿಸುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಇದೀಗ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಆಡಳಿತ ಮಂಡಳಿಯು ಬಾಯ್ಲಿಂಗ್ ಹೌಸ್ ಕಾಮಗಾರಿಯ ನೆಪವೊಡ್ಡುತ್ತಿದೆ ಎಂದು ರೈತರು ದೂರಿದ್ದಾರೆ.
ಇದೇ ವೇಳೆ, ಹೊಲಗಳಲ್ಲಿ ಉಳಿದುಕೊಂಡಿರುವ ಹೆಚ್ಚುವರಿ ಕಬ್ಬನ್ನು ಅಕ್ಕಪಕ್ಕದ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್ ತಿಳಿಸಿದ್ದಾರೆ. ಆದರೆ, ಸರ್ಕಾರಿ ಕಾರ್ಖಾನೆಯನ್ನು ನಂಬಿ ಕುಳಿತ ರೈತರು ಈಗ ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಸಾಗಿಸಬೇಕಾದರೆ ಹೆಚ್ಚಿನ ಸಾರಿಗೆ ವೆಚ್ಚವನ್ನು ತಮ್ಮ ಸ್ವಂತ ಜೇಬಿನಿಂದಲೇ ಭರಿಸಬೇಕಾಗುತ್ತದೆ. ಈಗಾಗಲೇ ಸಾಲದೂಳಗೆ ಸಿಲುಕಿ ನಷ್ಟ ಅನುಭವಿಸುತ್ತಿರುವ ಅನ್ನದಾತರಿಗೆ ಈ ಹೆಚ್ಚುವರಿ ಸಾಗಾಣಿಕೆ ವೆಚ್ಚದ ಹೊರೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರಕಾರಿ ಸ್ವಾಮ್ಯದ ಕಾರ್ಖಾನೆಯ ಈ ನಿರ್ಧಾರದಿಂದ ಕಂಗೆಟ್ಟಿರುವ ರೈತರು, ಹೆಚ್ಚುವರಿ ವೆಚ್ಚದ ಹೊರೆಯಿಂದ ರೈತಾಪಿ ವರ್ಗವನ್ನು ಪಾರು ಮಾಡಲು ರಾಜ್ಯ ಸರ್ಕಾರವು ಯಾವ ರೀತಿಯ ವಿಶೇಷ ಪ್ಯಾಕೇಜ್ ಅಥವಾ ಪರಿಹಾರ ಘೋಷಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
#Mandya #MySugarFactory #SugarcaneFarmers #KarnatakaNews #Udayakala #MandyaNews #FarmersCrisis #SugarFactoryShutdown


