Saturday, November 14, 2026
Menu

ದಾವಣಗೆರೆಗೆ ಆಂಧ್ರ ಭತ್ತ ಲಗ್ಗೆ: ಸ್ಥಳೀಯ ಭತ್ತ ಬೆಲೆ ಕುಸಿದು ಕಂಗಾಲಾದ ಅನ್ನದಾತ!

ಉದಯಕಾಲ ನ್ಯೂಸ್‌, ದಾವಣಗೆರೆ: ಬರಗಾಲದ ನಡುವೆಯೂ ಸಾಲ ಮಾಡಿ, ಬೋರ್‌ವೆಲ್ ನೀರನ್ನು ನೆಚ್ಚಿಕೊಂಡು ಭತ್ತ ಬೆಳೆದ ದಾವಣಗೆರೆ ಜಿಲ್ಲೆಯ ರೈತರಿಗೆ ತೀವ್ರ ಆಘಾತ ಉಂಟಾಗಿದೆ. ಆಂಧ್ರಪ್ರದೇಶದಿಂದ ಭಾರಿ ಪ್ರಮಾಣದಲ್ಲಿ ಭತ್ತ ದಾವಣಗೆರೆ ಎಪಿಎಂಸಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಸ್ಥಳೀಯ ಭತ್ತದ ಬೆಲೆ ಒಂದೇ ವಾರದಲ್ಲಿ ಕ್ವಿಂಟಲ್‌ಗೆ 600 ರೂಪಾಯಿಗಳಿಗೂ ಹೆಚ್ಚು ಕುಸಿದಿದೆ. ಮಳೆ ಕೊರತೆ ಹಾಗೂ ನೀರಿನ ಅಭಾವದಿಂದ ಕೇವಲ ಶೇ. 20ರಷ್ಟು ಮಾತ್ರ ಬೆಳೆ ಬೆಳೆದಿರುವ ರೈತರಿಗೆ ಈ ಬೆಲೆ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಭದ್ರಾ ನೀರಿಲ್ಲದೆ ಸಂಕಷ್ಟ, ಈಗ ಭತ್ತ ಬೆಲೆ ಕುಸಿತ!

ಈ ಬಾರಿ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸರಿಯಾಗಿ ನೀರು ಸಿಗದ ಕಾರಣ ಒಂದೂವರೆ ಲಕ್ಷ ಎಕರೆ ಬದಲು ಕೇವಲ 25 ಸಾವಿರ ಎಕರೆಯಲ್ಲಿ (ಶೇ. 20ರಷ್ಟು ಪ್ರದೇಶ) ಮಾತ್ರ ರೈತರು ಭತ್ತ ಬೆಳೆದಿದ್ದಾರೆ. ಕಷ್ಟಪಟ್ಟು ಬೆಳೆದು ಮಾರುಕಟ್ಟೆಗೆ ತಂದಾಗ, ಕಳೆದ ವಾರವಷ್ಟೇ ಕ್ವಿಂಟಲ್‌ಗೆ 4,200 ರಿಂದ 4,500 ರೂ. ಇದ್ದ ಭತ್ತದ ದರ ಈಗ 3,500 ರಿಂದ 3,600 ರೂ.ಗೆ ಕುಸಿದಿದೆ. ಆಂಧ್ರಪ್ರದೇಶದಿಂದ ಪ್ರತಿದಿನ ನೂರಕ್ಕೂ ಹೆಚ್ಚು ಲಾರಿಗಳ ಮೂಲಕ ಭತ್ತ ನೇರವಾಗಿ ಮಿಲ್ಲುಗಳಿಗೆ ಬರುತ್ತಿರುವುದರಿಂದ ಸ್ಥಳೀಯ ಭತ್ತವನ್ನು ಕೇಳುವವರು ಇಲ್ಲದಂತಾಗಿದೆ ಎಂದು ರೈತರು ಮತ್ತು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿ ಅಂಗಡಿಯಲ್ಲಿ ಕೆಲಸ ಮಾಡುವ ಹಾಲೇಶ್ ಹೇಳುವಂತೆ ಭತ್ತದ ರೇಟು ಕಳೆದ ವಾರ 4,200-4,300 ಕ್ವಿಂಟಲ್ ಭತ್ತಕ್ಕೆ ದರ ಇತ್ತು. ಈ ವಾರ ಕಡಿಮೆ ಆಗಿದೆ. ಆಂಧ್ರದಿಂದ ಅಧಿಕ ಪ್ರಮಾಣದಲ್ಲಿ ಭತ್ತ ಬರುತ್ತಿದೆ. ಅ ಕಾರಣ ಸ್ಥಳೀಯ ಭತ್ತಕ್ಕೆ ದರ ಇಳಿಕೆಯಾಗಿದೆ. ದಾವಣಗೆರೆ ಜಿಲ್ಲೆಗೆ ಆಂಧ್ರದಿಂದ ಬರೋಬ್ಬರಿ 100ಕ್ಕೂ ಅಧಿಕ ಗಾಡಿಗಳು ಭತ್ತ ಹೊತ್ತು ತರುತ್ತಿವೆ. ಆದ್ದರಿಂದ ಇಲ್ಲಿ ದರ ಇಳಿಕೆ ಕಂಡಿದೆ. ದಿನನಿತ್ಯ ಒಂದು ಮಿಲ್​ಗೆ ಮೂರು ಲೋಡ್ ಲಾರಿ ಭತ್ತ ಬರುತ್ತಿದೆ. ಅದ್ದರಿಂದ ಇಲ್ಲಿನ ರೈತರಿಗೆ ಬಹಳ ಹೊಡೆತ ಬೀಳುತ್ತಿದೆ. ಅಲ್ಲಿಂದ ಬಂದ ಭತ್ತ ಸೀದಾ ಮಿಲ್ಲಿಗೆ ಬೀಳುತ್ತದೆ. ಇಲ್ಲಿ ಎಪಿಎಂಸಿಗೆ ಭತ್ತ ಖರೀದಿಸಲು ಯಾರೂ ಬರುತ್ತಿಲ್ಲ. ಭತ್ತದ ಗೊಬ್ಬರ ರೇಟು 4,500 ಇದೆ. ರೈತರು ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ಇದೆ ಎಂದು ತಿಳಿಸಿದರು.‌

ಹೊರಗಡೆಯಿಂದ ಭತ್ತ ತರಿಸಿ ನಮ್ಮ ರೈತರಿಗೆ ಕ್ವಿಂಟಲ್​​ಗೆ 500-600 ಲಾಸ್ ಆಗ್ತಿದೆ. ರೈತರು ಏನ್ ಮಾಡಕ್ಕಾಗಲ್ಲ. ನಮಗೆ ತೊಂದರೆ ಆಗ್ತಿದೆ. ನಾವು ಏನ್ ಬೆಳೆದ್ರು ತಕ್ಕ ಬೆಲೆ ಸಿಗುತ್ತಿಲ್ಲ. ಲೋಡ್ ಗಟ್ಟಲೆ ಆಂಧ್ರ ಭತ್ತ ಬರುತ್ತಿದೆ. ನಮಗೆ ಇಲ್ಲಿ ನಷ್ಟ ಆಗ್ತಿದೆ. ನಮ್ಮ ಭತ್ತಕ್ಕೆ ಬೆಲೆ ಇಲ್ಲದಂತೆ ಆಗಿದೆ. ತೊಂದರೆಯಾಗ್ತಿದೆ. ನಮ್ಮದು ಎರಡು ಎಕರೆ ಭತ್ತ ಇದೆ. ಇಲ್ಲಿ ನೋಡಿದ್ರೇ ಬೆಲೆ ಇಳಿಕೆಯಾಗಿದೆ. ನಾವು ತರಿಸುವುದು ಬೇಡ ಎಂದ್ರು ನಿಲ್ಲಿಸುತ್ತಿಲ್ಲ‌. ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಹೊರಗಡೆಯಿಂದ ತರಿಸಿಲಿ ಬೇಡ ಎನ್ನುವುದಿಲ್ಲ, ಅವರಿಗೆ ಯಾವ ದರ ಕೊಡ್ತಿದ್ದರೋ ಅದೇ ದರ ನಮ್ಮ ಭತ್ತಕ್ಕೂ ನಿಗದಿ ಮಾಡಿ ಖರೀದಿ ಮಾಡಿ‌ ಎಂದು ರೈತ ಬಸವರಾಜಪ್ಪ ಮನವಿ ಮಾಡಿದರು.

ಸರ್ಕಾರದ ಮಧ್ಯಪ್ರವೇಶಕ್ಕೆ ರೈತರ ಆಗ್ರಹ

ಹೊರರಾಜ್ಯದಿಂದ ಬರುತ್ತಿರುವ ಭತ್ತದ ಆವಕವನ್ನು ತಕ್ಷಣ ನಿಯಂತ್ರಿಸಬೇಕು ಇಲ್ಲವೇ ಬೆಂಬಲ ಬೆಲೆಯಡಿ ಸ್ಥಳೀಯ ರೈತರ ಭತ್ತವನ್ನು ನೇರವಾಗಿ ಖರೀದಿಸಬೇಕು ಎಂದು ಅನ್ನದಾತರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಬೀಜ, ಗೊಬ್ಬರ ಹಾಗೂ ಕೃಷಿ ಕೂಲಿ ವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ, ಹಾಕಿದ ಬಂಡವಾಳವೂ ಕೈಸೇರದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಮಾರುಕಟ್ಟೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳದಿದ್ದರೆ, ರೈತರು ತೀವ್ರ ಸಾಲದ ಸುಳಿಗೆ ಸಿಲುಕುವುದು ಖಚಿತವಾಗಿದೆ.
#Davangere #PaddyPriceCrash #AndhraPaddy #FarmersProtest #KarnatakaNews #Udayakala #AgricultureCrisis

Related Posts

Leave a Reply

Your email address will not be published. Required fields are marked *