ಉದಯಕಾಲ ನ್ಯೂಸ್, ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿರುವ ಪುಂಡರ ವ್ಹೀಲಿಂಗ್ ಹಾವಳಿ ಮತ್ತೆ ತೀವ್ರಗೊಂಡಿದೆ. ವೀಕೆಂಡ್‌ಗಳಲ್ಲಿ ಪೊಲೀಸರ ಕಣ್ತಪ್ಪಿಸಿ ಅಥವಾ ಅವರ ಭಯವಿಲ್ಲದೆ ರಾತ್ರಿ ವೇಳೆ ರಸ್ತೆಗಳನ್ನು ತಮ್ಮ ಕಂಟ್ರೋಲ್‌ಗೆ ತೆಗೆದುಕೊಳ್ಳುತ್ತಿರುವ ಖದೀಮರು, ಸಾರ್ವಜನಿಕರಿಗೆ ಜೀವ ಭಯ ಹುಟ್ಟಿಸುತ್ತಿದ್ದಾರೆ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಚಿಕ್ಕಬಿದರಕಲ್ಲು ಫ್ಲೈಓವರ್ ಮೇಲೆ ನಡೆದ ಇತ್ತೀಚಿನ ಕೃತ್ಯವು ಇದಕ್ಕೆ ಜೀವಂತ ಸಾಕ್ಷಿಯಾಗಿದ್ದು, ವಾಹನ ಸವಾರರು ಆತಂಕಕ್ಕೀಡಾಗಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳು, ಒನ್ ವೇ ನಲ್ಲಿ ಯದ್ವಾತದ್ವಾ ವ್ಹೀಲಿಂಗ್
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯು ರಾಜ್ಯದ ಸುಮಾರು 21 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಅತ್ಯಂತ ಮುಖ್ಯ ಹಾಗೂ ನಿರಂತರ ವಾಹನ ದಟ್ಟಣೆಯಿಂದ ಕೂಡಿರುವ ಹೆದ್ದಾರಿಯಾಗಿದೆ. ಆದರೆ, ಪಾರ್ಲೆಜಿ ಟೋಲ್ ದಾಟಿದ ಬಳಿಕ ಬರುವ ಚಿಕ್ಕಬಿದರಕಲ್ಲು ಫ್ಲೈಓವರ್ ಮೇಲೆ ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಯುವಕರ ಗುಂಪು ರಾಜಾರೋಷವಾಗಿ ಹುಚ್ಚಾಟ ಮೆರೆದಿದೆ. ಯಾವುದೇ ನಂಬರ್ ಪ್ಲೇಟ್‌ಗಳಿಲ್ಲದ 20ಕ್ಕೂ ಹೆಚ್ಚು ಬೈಕ್‌ಗಳು, ಸ್ಕೂಟರ್‌ಗಳು ಹಾಗೂ ಒಂದು ಕಾರನ್ನು ರಸ್ತೆಯ ಮಧ್ಯೆ ನಿಲ್ಲಿಸಿಕೊಂಡು ಈ ದುಷ್ಕರ್ಮಿಗಳು ವ್ಹೀಲಿಂಗ್ ಮಾಡಿದ್ದಾರೆ.
ವಿಶೇಷವಾಗಿ, ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ಕಟ್ ಮಾಡಿಸಿ ಕರ್ಕಶ ಶಬ್ದ ಮಾಡುತ್ತಾ ಹೆದ್ದಾರಿಯಲ್ಲಿ ಇವರು ನಡೆಸಿದ ಅನಾಚಾರ ಸ್ಥಳೀಯರನ್ನು ನಿದ್ದೆಗೆಡಿಸಿತ್ತು. ಅಷ್ಟೇ ಅಲ್ಲದೆ, ಪ್ರಮುಖ ಹೆದ್ದಾರಿಯ ಒನ್ ವೇ ರಸ್ತೆಯಲ್ಲೇ ಎರಡು ದಿಕ್ಕುಗಳಿಂದಲೂ ವಾಹನಗಳನ್ನು ನುಗ್ಗಿಸಿ, ಬೈಕ್‌ಗಳ ಮುಂಭಾಗದ ಚಕ್ರವನ್ನು ಮೇಲಕ್ಕೆತ್ತಿ ಅಪಾಯಕಾರಿ ಸ್ಟಂಟ್‌ಗಳನ್ನು ಪ್ರದರ್ಶಿಸಿದ್ದಾರೆ. ಈ ವೇಳೆ ಆ ಮಾರ್ಗವಾಗಿ ಸಂಚರಿಸುತ್ತಿದ್ದ ಇತರೆ ಸಾಮಾನ್ಯ ವಾಹನ ಸವಾರರು ಜೀವ ಭಯದಿಂದ ನಡುಗುವಂತಾಯಿತು.
ಸಂಚಾರ ಪೊಲೀಸರ ನಿರ್ಲಕ್ಷ್ಯ: ಸಾರ್ವಜನಿಕರ ಆಕ್ರೋಶ
ನಗರದ ಪ್ರಮುಖ ಹೆದ್ದಾರಿಗಳಲ್ಲಿ ಸತತವಾಗಿ ಇಂತಹ ಕಾನೂನುಬಹಿರ ಚಟುವಟಿಕೆಗಳು ನಡೆಯುತ್ತಿದ್ದರೂ, ಸಂಚಾರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ವೀಕೆಂಡ್‌ಗಳಲ್ಲಿ ರಾತ್ರಿ ವೇಳೆ ಪೊಲೀಸ್ ಗಸ್ತು ಕಾವಲು ಇಲ್ಲದಿರುವುದೇ ಈ ಪುಂಡರಿಗೆ ವರದಾನವಾಗಿದೆ. ಅಪಘಾತಗಳಿಗೆ ಆಹ್ವಾನ ನೀಡುವ ಇಂತಹ ಅಪಾಯಕಾರಿ ವ್ಹೀಲಿಂಗ್‌ಗಳಿಗೆ ಕಡಿವಾಣ ಹಾಕುವಂತೆ ಮತ್ತು ನಂಬರ್ ಪ್ಲೇಟ್ ಇಲ್ಲದೆ ತಿರುಗಾಡುವ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸವಾರರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.
#BangaloreNews #WheelingMenace #ChikkabidarakalluFlyover #TumkurRoad #TrafficPolice #Udayakala #KarnatakaNews #PublicSafety


