Menu

ವೋಟರ್‌ ಐಡಿ ದುರುಪಯೋಗ: ಅಮಾಯಕನ ವಿರುದ್ಧ ದಾಖಲಾಯ್ತು ಕೊಲೆ ಪ್ರಕರಣ

ವ್ಯಕ್ತಿಯೊಬ್ಬರ ವೋಟರ್ ಐಡಿ ಬಳಸಿ ಅಕ್ರಮವಾಗಿ ಸಿಮ್ ಕಾರ್ಡ್​ ಖರೀದಿಸಿ, ಅದನ್ನು ಕೊಲೆ ಕೃತ್ಯದಲ್ಲಿ ಬಳಸಿಕೊಂಡ ಪ್ರಕರಣವೊಂದು ಬೆಂಗಳೂರಿನಲ್ಲಿ ಬಯಲಾಗಿದೆ. ಸಂತ್ರಸ್ತನ ಹಳೆಯ ವೋಟರ್ ಐಡಿ ಪೋಟೊ ಬದಲಿಸಿ ಅಕ್ರಮವಾಗಿ ಸಿಮ್ ಕಾರ್ಡ್ ಖರೀದಿಸಿದ್ದ ಆರೋಪಿ ಅದನ್ನು ಕೊಲೆ ಕೃತ್ಯದ ವೇಳೆ ಬಳಸಿಕೊಂಡಿದ್ದ. ಹೀಗಾಗಿ ಕೊಲೆ ಕೇಸ್‌ನಲ್ಲಿ ಅಮಾಯಕನಿಗೆ ಮಾರತಹಳ್ಳಿ ಉಪವಿಭಾಗದ ಪೊಲೀಸರು ನೋಟಿಸ್‌ ನೀಡಿದ್ದರು.

ಹೊಸಕೋಟೆ ತಾಲೂಕಿನ ಲಕ್ಕೊಂಡನಹಳ್ಳಿಯ ನಿವಾಸಿ ಎಲ್.ಎಸ್. ಪುನೀತ್ (36) ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಕೊಂಡ ಸಂತ್ರಸ್ತ. 2024ರಲ್ಲಿ ನಡೆದ ನಟೋರಿಯಸ್ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಉಪವಿಭಾಗದ ಪೊಲೀಸರು ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಪುನೀತ್‌ಗೆ ನೋಟಿಸ್ ನೀಡಿದ್ದರು.

ಕೊಲೆ ಪ್ರಕರಣವು ತಮಿಳುನಾಡಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಆರೋಪಿಗಳ ಮೊಬೈಲ್ ಕರೆಗಳ ವಿವರ ಮತ್ತು ಸಿಮ್ ಕಾರ್ಡ್ ನೋಂದಣಿ ವಿಳಾಸ ಪರಿಶೀಲಿಸಿದಾಗ ಬೆಂಗಳೂರಿನ ವರ್ತೂರು ವಿಳಾಸಕ್ಕೆ ಲಿಂಕ್ ಆಗಿತ್ತು. ಇದರನ್ವಯ ಪೊಲೀಸರು ಪುನೀತ್ ಮನೆಗೆ ತೆರಳಿದ್ದರು.

2024ರ ಸೆಪ್ಟೆಂಬರ್ 18ರಂದು ವರ್ತೂರಿನ ಸುಲಿಕುಂಟೆ ಕಾಲೋನಿಯ ಎನ್. ರೇವಂತ್ ಕುಮಾರ್ (23) ಎಂಬವರನ್ನು ಒಂಬತ್ತು ಮಂದಿಯ ಗ್ಯಾಂಗ್ ಅಪಹರಿಸಿ ಕೊಲೆ ಮಾಡಿದ್ದರು. ಕೊಲೆಗಾರರಲ್ಲಿ ಒಬ್ಬ ಮುತಾನಲ್ಲೂರು ಕ್ರಾಸ್ ಬಳಿ ಅಂಗಡಿಯೊಂದರಲ್ಲಿ ಪುನೀತ್ ಅವರ ಮತದಾರರ ಗುರುತಿನ ಚೀಟಿ ಬಳಸಿ ಸಿಮ್ ಕಾರ್ಡ್ ಖರೀದಿಸಿದ್ದ.

ಪೊಲೀಸ್‌ ಠಾಣೆಗೆ ಹಾಜರಾದ ಪುನೀತ್, ಆ ಮತದಾರರ ಗುರುತಿನ ಚೀಟಿ 2009ರಲ್ಲಿ ಪಡೆದಿದ್ದು, ಅದರಲ್ಲಿರುವ ಪೋಟೊ ತನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರೋಪಿಗಳು ಪುನೀತ್ ದಾಖಲೆಗೆ ಬೇರೊಬ್ಬರ ಪೋಟೊ ಅಂಟಿಸಿ ವಂಚನೆ ಮಾಡಿರುವುದು ದೃಢಪಟ್ಟಿದೆ. ವೈಯಕ್ತಿಕ ದಾಖಲೆ ದುರುಪಯೋಗ ಆಗಿದೆ ಎಂದು ಪುನೀತ್ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *