ಬೆಂಗಳೂರಿನ ಯಶವಂತಪುರದಲ್ಲಿ ಮದುವೆಯಾಗಿ ಎಂಟು ತಿಂಗಳಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶಾರದ ಎಂಬ ಮಹಿಳೆ ಪತಿ ಮಹೇಶ್ ಮನೆಯಲ್ಲಿಯೇ ಇದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಶಾರದಾ ವೀಡಿಯೊ ಕಾಲ್ ಮಾಡಿ ನಾನು ಸಾಯುತ್ತೇನೆ ಎಂದು ಪತಿಗೆ ಹೇಳಿದ್ದರು. ಆದರೆ ಪತಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ತಿರಸ್ಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮದುವೆಯಾದ ಬಳಿಕ ಶಾರದಾ ಅವರಿಗೆ ಹಣಕ್ಕಾಗಿ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂದು ಕುಟುಂಬದವರು ಆರೋಪಿಸಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಿಗದಿಯಾಗಿದ್ದ ಮದುವೆ ನಿರಾಕರಿಸಿ ಯುವತಿ ಪ್ರಿಯತಮನೊಂದಿಗೆ ಪರಾರಿ
ಮನೆಯವರು ನಿಶ್ಚಯಿಸಿದ್ದ ಮದುವೆಯನ್ನು ನಿರಾಕರಿಸಿ ಸಂಬಂಧದಲ್ಲಿ ತಮ್ಮನಾಗುವ ಯುವಕನೊಂದಿಗೆ ಯುವತಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ದೇವನಹಳ್ಳಿ ತಾಲೂಕಿನ ಸಾವನಕನಹಳ್ಳಿ ನಿವಾಸಿ ಶಶಿಕಲಾ ಮತ್ತು ಹೊಸಕೋಟೆ ಹಳೆ ಊರಿನ ಪ್ರವೀಣ್ ಇಬ್ಬರೂ ಸಂಬಂಧಿಕರಾಗಿದ್ದು, ಅಕ್ಕ- ತಮ್ಮ. ಮೂರು ವರ್ಷಗಳಿಂದ ಇಬ್ಬರೂ ಪ್ರೀತಿ ಪ್ರೇಮದಲ್ಲಿದ್ದರು.
ಮನೆಯವರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿ, ಶಶಿಕಲಾಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯಿಸಿದ್ದರು. ಶಶಿಕಲಾ ಮದುವೆಗೆ ಕೆಲವು ದಿನಗಳ ಮೊದಲೇ ಪ್ರವೀಣ್ ಜೊತೆ ಪರಾರಿಯಾಗಿದ್ದಾಳೆ. ಶಶಿಕಲಾ ಮತ್ತು ಪ್ರವೀಣ್ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರನ್ನು ಭೇಟಿ ಮಾಡಿ ಭದ್ರತೆ ಮತ್ತು ನ್ಯಾಯ ಕೋರಿದ್ದಾರೆ. ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


