ಓಮನ್ ಸಮುದ್ರದ ಬಳಿ ಅಮೆರಿಕ ಸೇನೆಯು ಇರಾನ್‌ನ ಸರಕು ಹಡಗೊಂದನ್ನು ವಶಪಡಿಸಿಕೊಂಡಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿದೆ. ಈ ಬೆಳವಣಿಗೆ ಶಾಂತಿ ಒಪ್ಪಂದ ಸಾಧ್ಯತೆಯನ್ನು ಕುಗ್ಗಿಸಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚಿಸಿದೆ.
ಟೌಸ್ಕಾ ಎಂಬ ಇರಾನ್ ಹಡಗು ಓಮನ್ ಸಮುದ್ರದ ಬಳಿ ಅಮೆರಿಕ ನೌಕಾಪಡೆಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದರಿಂದ ಎಂಜಿನ್ ಭಾಗಕ್ಕೆ ಗುಂಡು ಹಾರಿಸಿ ಹಡಗನ್ನು ನಿಷ್ಕ್ರಿಯಗೊಳಿಸಿದೆ. ಹಡಗನ್ನು ವಶಕ್ಕೆ ಪಡೆದು ಅದರೊಳಗಿನ ಸರಕುಗಳನ್ನು ಪರಿಶೀಲನೆ ನಡೆಸಿದೆ.
ಅಮೆರಿಕದ ಈ ಕ್ರಮವನ್ನು “ಸಮುದ್ರ ದರೋಡೆ” ಎಂದು ಇರಾನ್ ಕರೆದಿದೆ. ಈ ವಿಚಾರವಾಗಿ ಸ್ಪಷ್ಟವಾಗಿ ಎಚ್ಚರಿಕೆ ನೀಡಿದೆ. ಅಮೆರಿಕದ ಈ ದಾಳಿಗೆ ನಾವು ಶೀಘ್ರ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಘೋಷಿಸಿದೆ. ಒಟ್ಟಿನಲ್ಲಿ ಸೇನಾ ಸಂಘರ್ಷದ ಭೀತಿ ಹೆಚ್ಚಿದೆ. ಅಧ್ಯಕ್ಷ ಮಸೂದ್ ಪೆಜೆಷ್ಕಿಯನ್ ಅಮೆರಿಕದ ಕ್ರಮವನ್ನು ಉದ್ದೇಶಪೂರ್ವಕ ಪ್ರಚೋದನೆ ಎಂದು ಟೀಕಿಸಿದ್ದಾರೆ. ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅಮೆರಿಕದ ಈ ನಡೆ ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಧಕ್ಕೆ ತರುತ್ತಿದೆ ಎಂದು ತಿಳಿಸಿದ್ದಾರೆ.
ಹರ್ಮುಜ್ ಜಲಸಂಧಿಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಅನೇಕ ಹಡಗುಗಳು ಸಾಗಲು ಸಾಧ್ಯವಾಗದೆ ವಾಪಸಾಗುತ್ತಿವೆ. ಇರಾನ್ ನಾಯಕರು ನಿಲುವನ್ನು ಕಠಿಣಗೊಳಿಸಿದ್ದು, ಅಮೆರಿಕ ತೈಲ ನಿರ್ಬಂಧಗಳನ್ನು ಹಿಂತೆಗೆದು ಕೊಳ್ಳುವವರೆಗೆ ಹರ್ಮುಜ್ ಮೂಲಕ ಸಾಗಣೆ ಮೇಲಿನ ನಿರ್ಬಂಧ ಮುಂದುವರಿಯುತ್ತದೆ ಎಂದು ಇರಾನ್ ತಿಳಿಸಿದೆ.


