ಬಿಟ್ಕಾಯಿನ್ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಜತೆ ಹಣಕಾಸು ವಹಿವಾಟು ನಡೆಸಿರುವ ಹಿನ್ನೆಲೆ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅವರ ಇಬ್ಬರು ಮಕ್ಕಳು ಮತ್ತು ಇತರರ ನಿವಾಸಗಳ ಮೇಲೆ ಇಡಿ
ದಾಳಿ ನಡೆಸಿದೆ.
ಸೋಮವಾರ ಬೆಳಿಗ್ಗೆ 6.30ಕ್ಕೆ ಇಡಿ ಬೆಂಗಳೂರು ವಲಯದ 100ಕ್ಕೂ ಹೆಚ್ಚು ಸಿಬ್ಬಂದಿ ಬೆಂಗಳೂರಿನ ಗರುಡಾ ಮಾಲ್ ಹಿಂಭಾಗದಲ್ಲಿರುವ ಶಾಸಕ ಹ್ಯಾರಿಸ್ ಅವರ ಶಾಂತಿನಗರದ ನಿವಾಸವೂ ಸೇರಿ ಒಟ್ಟು 17 ಕಡೆ ದಾಳಿ ನಡೆಸಿದ್ದಾರೆ.
ಹ್ಯಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಮತ್ತು ಒಮರ್ ಫಾರೂಕ್ ನಲಪಾಡ್, ಶ್ರೀಕಿ ಎಂಬ ಕ್ರಿಪ್ಟೋ ಹ್ಯಾಕರ್ ನಿವಾಸಗಳ ಮೇಲೂ ದಾಳಿ ನಡೆದಿದೆ. ಕೇಂದ್ರದ ಭದ್ರತಾ ಸಿಬ್ಬಂದಿ ಉಪಸ್ಥಿತಿಯಲ್ಲಿ ಇಡಿ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಬಿಟ್ಕಾಯಿನ್ ಪ್ರಕರಣ ಪತ್ತೆಯಾಗುವುದಕ್ಕೂ ಮೊದಲು ಆರು ವರ್ಷಗಳ ಅವಧಿಯಲ್ಲಿ ನಲಪಾಡ್ ಮತ್ತು ಶ್ರೀಕಿ ಮಧ್ಯೆ ನಿರಂತರ ಹಣಕಾಸು ವ್ಯವಹಾರ ನಡೆದಿದೆ. ಒಟ್ಟು ₹4.65 ಕೋಟಿ ಕೈಬದಲಾಗಿದೆ.
ಬಿಟ್ಕಾಯಿನ್ ವಹಿವಾಟಿಗೂ ಇದಕ್ಕೂ ಸಂಬಂಧವಿದೆಯೇ ಅಥವಾ ಇದು ಬೇರೆ ಅಕ್ರಮ ವಹಿವಾಟು ಆಗಿರುವುದೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಇಡಿ ಮೂಲಗಳು ತಿಳಿಸಿವೆ.


