ಉದಯಕಾಲ ನ್ಯೂಸ್, ಬೆಳಗಾವಿ: ಹೂಡಿಕೆದಾರರಿಗೆ ಮಾಸಿಕ ಶೇ. 3ರಷ್ಟು ಆಕರ್ಷಕ ಲಾಭಾಂಶ ಹಾಗೂ ಅಧಿಕ ಬಡ್ಡಿಯ ಆಮಿಷವೊಡ್ಡಿ ರಾಜ್ಯಾದ್ಯಂತ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕುಖ್ಯಾತ ಪೋನ್ಜಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗಾವಿ ಮೂಲದ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ಮುಖ್ಯಸ್ಥ ಶಿವಾನಂದ ಸಿದ್ದಪ್ಪ ನೀಲಣ್ಣವರ್ ಹಾಗೂ ಅವರ ವಿವಿಧ ಸಂಸ್ಥೆಗಳಿಗೆ ಸೇರಿದ ಒಟ್ಟು 427.16 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಇಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಏಜೆಂಟರ ಮೂಲಕ ಜಾಲವ್ಯಾಪಿಸಿ ಬರೋಬ್ಬರಿ 35,000ಕ್ಕೂ ಅಧಿಕ ಹೂಡಿಕೆದಾರರಿಂದ ಸುಮಾರು 2,459 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಸಂಗ್ರಹಿಸಿ ವಂಚನೆ ಎಸಗಿರುವುದು ತನಿಖೆಯಿಂದ ಬಯಲಾಗಿದೆ. ಹಳೆ ಹೂಡಿಕೆದಾರರಿಗೆ ಬಡ್ಡಿ ಮರುಪಾವತಿಸಲು ಹೊಸ ಹೂಡಿಕೆದಾರರ ಹಣವನ್ನು ಬಳಸಿಕೊಳ್ಳುವ ಮೂಲಕ ಈ ನಯವಂಚಕರು ದೊಡ್ಡ ಜಾಲವನ್ನೇ ಸೃಷ್ಟಿಸಿದ್ದರು.

ವಂಚನೆಯ ಮಾರ್ಗ
ವಿವಿಧ ಬ್ಯಾಂಕ್ಗಳಲ್ಲಿದ್ದ ಬರೋಬ್ಬರಿ 367.77 ಕೋಟಿ ರೂ.ಗಳ ಎಫ್ಡಿ (FD), 47 ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 44.37 ಕೋಟಿ ರೂ. ನಗದು, 13.68 ಕೋಟಿ ರೂ. ಮೌಲ್ಯದ 42 ಕೃಷಿ ಜಮೀನುಗಳು, ಬಂಗಲೆ, ಅಪಾರ್ಟ್ಮೆಂಟ್ಗಳು ಹಾಗೂ ಷೇರು ಹೂಡಿಕೆಗಳನ್ನು ಇಡಿ ಜಪ್ತಿ ಮಾಡಿದೆ.
ಷೇರು ಮಾರುಕಟ್ಟೆಯಲ್ಲಿ ಹಣ ಪೋಲು
ಸಾರ್ವಜನಿಕರಿಂದ ಸಂಗ್ರಹಿಸಿದ ಕೋಟ್ಯಂತರ ಹಣವನ್ನು ಶಿವಾನಂದ ನೀಲಣ್ಣವರ್ ಅವರು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ಬರೋಬ್ಬರಿ 185.95 ಕೋಟಿ ರೂಪಾಯಿಗಳ ಭಾರಿ ನಷ್ಟ ಅನುಭವಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಹೂಡಿಕೆದಾರರ ಕಷ್ಟದ ಹಣದಿಂದ ಸುಮಾರು 5 ಕೋಟಿ ರೂಪಾಯಿಯನ್ನು ‘ಚಾಂಪಿಯನ್’ ಎಂಬ ಕನ್ನಡ ಚಲನಚಿತ್ರ ನಿರ್ಮಾಣಕ್ಕೂ ಅಕ್ರಮವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇಡಿ ಬಹಿರಂಗಪಡಿಸಿದೆ.
ಕಳೆದ ಆಗಸ್ಟ್ನಲ್ಲಿ ಬೆಳಗಾವಿ, ಚಿಕ್ಕೋಡಿ ಹಾಗೂ ನಿಪ್ಪಾಣಿಯ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.ಸದ್ಯ ಪಿಎಂಎಲ್ಎ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
#EDRaid #PonziScheme #ShivangNillannavar #ShivamAssociates #BelagaviNews #FinancialFraud #UdayakalaNews #EnforcementDirectorate

