Thursday, November 12, 2026
Menu

ಉಕ್ರೇನ್ ಶಾಂತಿ ಒಪ್ಪಂದ ಮಾತನಾಡಲು ಪುಟಿನ್​ ಭೇಟಿ ಮಾಡಲಿರುವ ಅಮೆರಿಕದ ರಾಯಭಾರಿಗಳು

ಅಬುಧಾಬಿ, ಯುಎಇ: ರಷ್ಯಾ-ಉಕ್ರೇನ್ ನಡುವಿನ ದೀರ್ಘಕಾಲದ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ರಾಜತಾಂತ್ರಿಕ ಪ್ರಯತ್ನಗಳು ತೀವ್ರಗೊಂಡಿವೆ. ಯುಎಇಯ ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ ಮಹತ್ವದ ಸಭೆಯ ಬೆನ್ನಲ್ಲೇ, ಅಮೆರಿಕದ ವಿಶೇಷ ರಾಯಭಾರಿಗಳಾದ ಜೇರೆಡ್ ಕುಶ್ನರ್ ಮತ್ತು ಸ್ಟೀವ್ ವಿಟ್ಕಾಫ್ ಗುರುವಾರ ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಬುಧಾಬಿ ಮಾತುಕತೆ, ಹೊಸ ಭದ್ರತಾ ಪ್ರಸ್ತಾವನೆಗಳು

ಅಬುಧಾಬಿಯಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಅಧಿಕಾರಿಗಳ ನಡುವೆ ಎರಡು ದಿನಗಳ ಕಾಲ ಮಹತ್ವದ ಚರ್ಚೆಗಳು ನಡೆದಿದ್ದವು. ಆರಂಭದಲ್ಲಿ ಉದ್ವಿಗ್ನತೆಯಿಂದ ಕೂಡಿದ್ದ ಈ ಮಾತುಕತೆಯು, ನಂತರ ರಚನಾತ್ಮಕ ಹಂತಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಯುರೋಪ್-ರಷ್ಯಾ ಭದ್ರತಾ ವಿಚಾರಗಳು ಮತ್ತು ಉದ್ವಿಗ್ನತೆ ಕಡಿಮೆ ಮಾಡುವ ಕುರಿತು ಚರ್ಚಿಸಲಾಯಿತು. ರಷ್ಯಾದ ಭದ್ರತಾ ಕಾಳಜಿಗಳನ್ನು ಪರಿಹರಿಸುವ ಹೊಸ ಪ್ರಸ್ತಾಪಗಳನ್ನು ಮಾಸ್ಕೋ ಮುಂದೆ ಮಂಡಿಸಲು ಹಾಗೂ ಭವಿಷ್ಯದ ಶಾಂತಿ ಮಾತುಕತೆಗಳಲ್ಲಿ ಯುರೋಪಿಯನ್ ಪ್ರತಿನಿಧಿಗಳಿಗೂ ಅವಕಾಶ ನೀಡುವಂತೆ ವ್ಲಾಡಿಮಿರ್ ಪುಟಿನ್ ಅವರಿಗೆ ಮನವರಿಕೆ ಮಾಡಲು ಅಮೆರಿಕದ ಸಂಧಾನಕಾರರು ಮುಂದಾಗಿದ್ದಾರೆ.

ಖೈದಿಗಳ ವಿನಿಮಯ ಹಾಗೂ ಯುರೋಪ್ ಪಾಲ್ಗೊಳ್ಳುವಿಕೆಯೇ ಸವಾಲು

ಅಬುಧಾಬಿ ಚರ್ಚೆಗಳ ಪ್ರಮುಖ ಫಲಿತಾಂಶವಾಗಿ ಖೈದಿಗಳ ವಿನಿಮಯ ಒಪ್ಪಂದದ ಬಗ್ಗೆ ಸಕಾರಾತ್ಮಕ ಚರ್ಚೆ ನಡೆದಿದ್ದು, ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗಿನ ಇಂದಿನ ಸಭೆಯಲ್ಲಿ ಬಿಡುಗಡೆ ಮಾಡಬೇಕಾದ ನಿಖರ ಖೈದಿಗಳ ಸಂಖ್ಯೆ ಅಂತಿಮಗೊಳ್ಳಲಿದೆ. ಕುಶ್ನರ್ ಮತ್ತು ವಿಟ್ಕಾಫ್ ಅವರು ಮಾಸ್ಕೋ ಭೇಟಿಯ ಬಳಿಕ ಗುರುವಾರ ರಾತ್ರಿಯೇ ಡಬ್ಲಿನ್‌ಗೆ ತೆರಳಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಭೇಟಿಯಾಗಲಿದ್ದಾರೆ. ಆದರೆ, ಮಾಸ್ಕೋ ಇದುವರೆಗೆ ಶಾಂತಿ ಮಾತುಕತೆಗಳಲ್ಲಿ ಯುರೋಪ್ ಭಾಗಿಯಾಗುವುದನ್ನು ವಿರೋಧಿಸುತ್ತಾ ಬಂದಿರುವುದು ಪ್ರಮುಖ ಸವಾಲೆನಿಸಿದೆ. ಈ ನಿಟ್ಟಿನಲ್ಲಿ ಅಮೆರಿಕದ ರಾಯಭಾರಿಗಳು ಯಾವ ರೀತಿಯ ರಾಜತಾಂತ್ರಿಕ ಯಶಸ್ಸು ಕಾಣಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
#UkraineRussiaWar #PeaceTalks #USEnvoys #VladimirPutin #VolodymyrZelensky #JaredKushner #AbuDhabiTalks #UdayakalaNews

Related Posts

Leave a Reply

Your email address will not be published. Required fields are marked *