ಉದಯಕಾಲ ನ್ಯೂಸ್, ನವದೆಹಲಿ: ರಾಜಧಾನಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಮಹಾನಗರ ಪಾಲಿಕೆಯು “ಭರವಸೆಯ ಸ್ವಚ್ಛ ನಗರ” ಎಂಬ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾಗಿದೆ. ರಾಷ್ಟ್ರಪತಿಗಳ ಅಮೃತ ಹಸ್ತದಿಂದ ಈ ಪ್ರಶಸ್ತಿಯನ್ನು ಮಹಾನಗರ ಪಾಲಿಕೆಯು ಸ್ವೀಕರಿಸಿತು.
ಸ್ವಚ್ಛತೆ ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಸಂದ ಮನ್ನಣೆ
ಸ್ವಚ್ಛ ಭಾರತ್ ಮಿಷನ್–ನಗರ ಯೋಜನೆಯಡಿ ಮೈಸೂರು ನಗರದಲ್ಲಿ ಹಮ್ಮಿಕೊಳ್ಳಲಾದ ನಿರಂತರ ಕ್ರಮಗಳಿಗೆ ಈ ರಾಷ್ಟ್ರೀಯ ಮಟ್ಟದ ಮನ್ನಣೆ ದೊರೆತಿದೆ. ಮನೆಮನೆಗಳಿಂದ ಕಸ ಸಂಗ್ರಹಣೆ, ಮೂಲದಲ್ಲಿಯೇ ಹಸಿ ಕಸ ಹಾಗೂ ಒಣ ಕಸ ವಿಂಗಡಣೆ, ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ, ಪಾರಂಪರಿಕ ತ್ಯಾಜ್ಯದ ಜೈವಿಕ ಗಣಿಗಾರಿಕೆ ಹಾಗೂ ಸಾರ್ವಜನಿಕ ನೈರ್ಮಲ್ಯ ಸೌಲಭ್ಯಗಳ ಅಭಿವೃದ್ಧಿಗೆ ಪಾಲಿಕೆ ವಿಶೇಷ ಒತ್ತು ನೀಡಿದೆ. ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಗರದಲ್ಲಿ ಕೈಗೊಂಡ ಸ್ವಚ್ಛತಾ ಚಟುವಟಿಕೆಗಳು ಈ ಯಶಸ್ಸಿಗೆ ಪ್ರಮುಖ ಕಾರಣವಾಗಿವೆ ಎಂದು ಪ್ರಶಸ್ತಿ ಸ್ವೀಕರಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಪೌರಕಾರ್ಮಿಕರ ಪರಿಶ್ರಮ ಹಾಗೂ ಎಲ್ಲರ ಸಹಯೋಗ
ಈ ಮಹತ್ವದ ಸಾಧನೆಯು ಮೈಸೂರು ಮಹಾನಗರಪಾಲಿಕೆಯ ಅಧಿಕಾರಿಗಳು, ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಸ್ವಚ್ಛತಾ ಮೇಲ್ವಿಚಾರಕರು ಮತ್ತು ಸಮಸ್ತ ನಾಗರಿಕರ ಸಂಘಟಿತ ಶ್ರಮದ ಫಲವಾಗಿದೆ. ಅದರಲ್ಲೂ ಪ್ರತಿನಿತ್ಯ ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಯ ಸಮರ್ಪಣಾ ಮನೋಭಾವಕ್ಕೆ ಈ ಗೌರವವನ್ನು ಸಮರ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರನ್ನು ರಾಷ್ಟ್ರಮಟ್ಟದಲ್ಲಿ ಅತ್ಯಂತ ಸ್ವಚ್ಛ ಹಾಗೂ ಸುಸ್ಥಿರ ನಗರಗಳ ಸಾಲಿನಲ್ಲಿ ಮುಂಚೂಣಿಗೆ ತರಲು ಪಾಲಿಕೆ ಬದ್ಧವಾಗಿದೆ. ಈ ಸಮಾರಂಭದಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ, ಮೈಸೂರು ಮಹಾನಗರಪಾಲಿಕೆ ಆಡಳಿತಾಧಿಕಾರಿ ನಿತೇಶ್ ಪಾಟೀಲ್, ಸ್ವಚ್ಛ ಭಾರತ್ ಮಿಷನ್ ಮಿಷನ್ ನಿರ್ದೇಶಕ ಡಾ. ಸೆಲ್ವಮಣಿ ಹಾಗೂ ಕಾರ್ಯಪಾಲಕ ಅಭಿಯಂತರ ಮೃತ್ಯುಂಜಯ ಕೆ.ಎಸ್. ಉಪಸ್ಥಿತರಿದ್ದರು.
#SwachhSurvekshan #Mysuru #PromisingCity #KarnatakaNews #SwachhBharatMission #MysuruCityCorporation #UdayakalaNews

