Thursday, November 12, 2026
Menu

ಶಿವಮೊಗ್ಗದಲ್ಲಿ 3 ತಿಂಗಳು ವಿಮಾನ ಹಾರಾಟ ಸ್ಥಗಿತ: ಅಧ್ಯಕ್ಷ ನಂಜಯ್ಯನಮಠ್ ಸ್ಪಷ್ಟನೆ

ಉದಯಕಾಲ ನ್ಯೂಸ್,ಶಿವಮೊಗ್ಗ: ಜಿಲ್ಲೆಯ ಕುವೆಂಪು ವಿಮಾನ ನಿಲ್ದಾಣದಲ್ಲಿ ಉಡಾನ್ ಯೋಜನೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ, ನವೆಂಬರ್ 21ರಿಂದ ಮುಂದಿನ ಮೂರು ತಿಂಗಳುಗಳ ಕಾಲ ವಿಮಾನ ಹಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ಅಧ್ಯಕ್ಷ ನಂಜಯ್ಯನಮಠ್ ತಿಳಿಸಿದ್ದಾರೆ.

ಉಡಾನ್ ಯೋಜನೆ ಮುಕ್ತಾಯ; 3 ತಿಂಗಳು ವಿಮಾನಯಾನ ಇಲ್ಲ

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿಗೆ ಉಡಾನ್ ಯೋಜನೆ ಮುಕ್ತಾಯಗೊಂಡಿರುವುದರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದರು. ಯೋಜನೆಯನ್ನು ಮುಂದುವರಿಸುವಂತೆ ದೆಹಲಿಯಲ್ಲಿ ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡು ವಿಮಾನಯಾನ ಪುನರಾರಂಭಗೊಳ್ಳಲು ಅಂದಾಜು ಮೂರು ತಿಂಗಳು ಬೇಕಾಗಬಹುದು ಎಂದು ಸ್ಪಷ್ಟಪಡಿಸಿದರು. ಸಂಸದ ಬಿ.ವೈ. ರಾಘವೇಂದ್ರ ಅವರ ಮೂಲಕವೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದರು.

13 ಹೊಸ ಮಾರ್ಗಗಳಿಗೆ ಪ್ರಸ್ತಾವನೆ ಹಾಗೂ ನೌಕರರ ವೇತನ ಮುಂದುವರಿಕೆ

ಕೆಎಸ್ಐಐಡಿಸಿ ವತಿಯಿಂದ ಶಿವಮೊಗ್ಗದಿಂದ ಬೆಂಗಳೂರು, ಹೈದರಾಬಾದ್, ಗೋವಾ, ಮುಂಬೈ, ಪುಣೆ, ಮೈಸೂರು, ಚೆನ್ನೈ ಸೇರಿದಂತೆ ಒಟ್ಟು 13 ಮಾರ್ಗಗಳಿಗೆ ವಿಮಾನ ಹಾರಾಟ ನಡೆಸಲು ಮನವಿ ಸಲ್ಲಿಸಲಾಗಿದೆ. ವಿಮಾನ ಹಾರಾಟ ಮೂರು ತಿಂಗಳು ಸ್ಥಗಿತಗೊಂಡರೂ ಸಹ ವಿಮಾನ ನಿಲ್ದಾಣದ 80 ಮಂದಿ ನೌಕರರನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು. ನೌಕರರ ವೇತನ ಹಾಗೂ ನಿರ್ವಹಣೆಗೆ ಪ್ರತಿ ತಿಂಗಳು ಸುಮಾರು 95 ಲಕ್ಷ ರೂ. ವೆಚ್ಚವಾಗುತ್ತಿದ್ದು, ಸರ್ಕಾರದ ಆರ್ಥಿಕ ನೀತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ನೈಟ್ ಲ್ಯಾಂಡಿಂಗ್ ಕಾಮಗಾರಿ ಬಹುತೇಕ ಪೂರ್ಣ

ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯೂ ವಿಮಾನಗಳ ಇಳಿಕೆಗೆ ಅನುಕೂಲವಾಗುವ ‘ನೈಟ್ ಲ್ಯಾಂಡಿಂಗ್’ ಕಾಮಗಾರಿ ಈಗಾಗಲೇ ಶೇ.95ರಷ್ಟು ಪೂರ್ಣಗೊಂಡಿದೆ. ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡಿದ ಬಳಿಕ ರಾತ್ರಿ ಹಾರಾಟಕ್ಕೂ ಅವಕಾಶ ದೊರೆಯಲಿದೆ. ಬೆಂಗಳೂರು-ಶಿವಮೊಗ್ಗ ವಿಮಾನ ಹಾರಾಟಕ್ಕೆ ಸಂಬಂಧಿಸಿದ ವಿಜಿಎಫ್ (VGF) ಯೋಜನೆಗೆ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಏರ್ಪೋರ್ಟ್ ನಿರ್ದೇಶಕ ಶಂಮತ್ ಹಾಗೂ ಡಿವೈಎಸ್ಪಿ ಚಂದ್ರಶೇಖರ್ ಉಪಸ್ಥಿತರಿದ್ದರು.
#ShivamoggaAirport #KuvempuAirport #UdanScheme #Nanjayanarnath #KSIIDC #KarnatakaNews #UdayakalaNews

Related Posts

Leave a Reply

Your email address will not be published. Required fields are marked *