Thursday, November 12, 2026
Menu

ಪೋಷಕರನ್ನು ನಿರ್ಲಕ್ಷಿಸಿದರೆ ಸರ್ಕಾರಿ ವೇತನದಿಂದ ರೂ. 10,000 ಕಡಿತ: ತೆಲಂಗಾಣದಲ್ಲಿ ಹೊಸ ಕಾನೂನು

ಉದಯಕಾಲ ನ್ಯೂಸ್, ಹೈದರಾಬಾದ್‌:  ವೃದ್ಧ ಪೋಷಕರನ್ನು ನಿರ್ಲಕ್ಷಿಸುವ ಸರ್ಕಾರಿ ನೌಕರರಿಗೆ ಶಾಕ್ ನೀಡಲು ತೆಲಂಗಾಣ ಸರ್ಕಾರ ಮುಂದಾಗಿದೆ. ವೃದ್ಧಾಪ್ಯದಲ್ಲಿ ಮಕ್ಕಳಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗುವ ಪೋಷಕರನ್ನು ರಕ್ಷಿಸುವ ಮತ್ತು ಅವರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ‘ತೆಲಂಗಾಣ ನೌಕರರ ಹೊಣೆಗಾರಿಕೆ ಮತ್ತು ಪೋಷಕರ ಬೆಂಬಲ ಮೇಲ್ವಿಚಾರಣಾ ಕಾಯಿದೆ- 2026’ ಅನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಕಾಯ್ದೆಯ ಅಡಿಯಲ್ಲಿ ಪೋಷಕರನ್ನು ಕಡೆಗಣಿಸುವ ನೌಕರರ ವೇತನದಿಂದ ನೇರವಾಗಿ ಹಣ ಕಡಿತಗೊಳಿಸಿ ಪೋಷಕರ ಖಾತೆಗೆ ಜಮೆ ಮಾಡಲಾಗುತ್ತದೆ.

ಕಾಯ್ದೆಯ ಪ್ರಮುಖ ನಿಯಮಗಳು

ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯು ಈ ಕಾಯ್ದೆಯ ಅನುಷ್ಠಾನಕ್ಕಾಗಿ ಈಗಾಗಲೇ ನಿಯಮಗಳನ್ನು ರೂಪಿಸಿ ಅಂತಿಮ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಿದೆ. ಈ ಹೊಸ ನಿಯಮದ ಪ್ರಕಾರ, ಸರ್ಕಾರಿ ನೌಕರರಾಗಿರುವ ತಮ್ಮ ಮಕ್ಕಳಿಂದ (ಗಂಡು, ಹೆಣ್ಣು ಅಥವಾ ದತ್ತು ಪಡೆದ ಮಕ್ಕಳು) ನಿರ್ಲಕ್ಷ್ಯಕ್ಕೊಳಗಾದ ಪೋಷಕರು ಜಿಲ್ಲಾಧಿಕಾರಿಗಳ ನೇತೃತ್ವದ ವಿಶೇಷ ಪ್ರಾಧಿಕಾರಕ್ಕೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಪರಿಶೀಲನೆಯ ನಂತರ ಸಂಬಂಧಪಟ್ಟ ನೌಕರರಿಗೆ ನೋಟಿಸ್ ಜಾರಿಗೊಳಿಸಲಾಗುತ್ತದೆ. ನೌಕರರು ವಿಚಾರಣೆಗೆ ಹಾಜರಾಗಲು ವಿಫಲವಾದರೆ ಅಥವಾ ತಕ್ಕ ಸಮರ್ಥನೆ ನೀಡದಿದ್ದರೆ, ಅಂತಹ ನೌಕರರ ಒಟ್ಟು ಮಾಸಿಕ ವೇತನದ ಶೇಕಡಾ 15ರಷ್ಟು ಅಥವಾ ಗರಿಷ್ಠ 10,000 ರೂ. ಇವೆರಡರಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ಕಡಿತಗೊಳಿಸಿ ನೇರವಾಗಿ ಪೋಷಕರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಜಮೆ ಮಾಡಲಾಗುತ್ತದೆ. ಒಂದಕ್ಕಿಂತ ಹೆಚ್ಚು ಮಕ್ಕಳು ಸರ್ಕಾರಿ ನೌಕರರಿದ್ದರೆ, ಈ ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಳ್ಳಲಾಗುತ್ತದೆ.

ಸಲ್ಲಿಕೆಯಾಗಿರುವ ದೂರುಗಳು ಮತ್ತು ಮೇಲ್ಮನವಿ ವ್ಯವಸ್ಥೆ

ಈ ಕಾಯ್ದೆ ಅಧಿಕೃತವಾಗಿ ಜಾರಿಗೆ ಬರುವ ಮುನ್ನವೇ ರಾಜ್ಯದಲ್ಲಿ ಈ ಸಂಬಂಧ ಐದು ದೂರುಗಳು ಸರ್ಕಾರದ ಗಮನಕ್ಕೆ ಬಂದಿವೆ. ಹೈದರಾಬಾದ್‌ನಿಂದ ಮೂರು ಹಾಗೂ ಕರೀಂನಗರ ಮತ್ತು ನಿಜಾಮಾಬಾದ್‌ನಿಂದ ತಲಾ ಒಂದೊಂದು ದೂರುಗಳು ಸಲ್ಲಿಕೆಯಾಗಿವೆ. ಜಿಲ್ಲಾ ಪ್ರಾಧಿಕಾರಗಳು ಹೊರಡಿಸುವ ಆದೇಶಗಳನ್ನು ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ಕಡ್ಡಾಯವಾಗಿ 60 ದಿನಗಳ ಒಳಗಾಗಿ ಜಾರಿಗೊಳಿಸಬೇಕು.

ಜಿಲ್ಲಾ ಪ್ರಾಧಿಕಾರಗಳ ತೀರ್ಪಿನ ವಿರುದ್ಧ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ಹಿರಿಯ ನಾಗರಿಕರ ಆಯೋಗದ ಮುಖ್ಯ ಆಯುಕ್ತರ ನೇತೃತ್ವದ ಸಮಿತಿಯು ಪ್ರತಿ ಆರು ತಿಂಗಳಿಗೊಮ್ಮೆ ಇಂತಹ ಪ್ರಕರಣಗಳ ಪರಿಶೀಲನೆ ನಡೆಸಲಿದೆ. ಅಲ್ಲದೆ, ಪ್ರಕ್ರಿಯೆ ನಡೆಯುತ್ತಿರುವ ಯಾವುದೇ ಹಂತದಲ್ಲಿ ಪೋಷಕರು ಬಯಸಿದರೆ ತಮ್ಮ ಅರ್ಜಿಯನ್ನು ಹಿಂಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ.
#TelanganaGovernment #ParentCareAct #GovtEmployees #SeniorCitizens #LawAndOrder #TelanganaNews #UdayakalaNews

Related Posts

Leave a Reply

Your email address will not be published. Required fields are marked *