ಬೆಂಗಳೂರಿನ ಮಲ್ಲೇಶ್ವರದಲ್ಲಿ ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಸಿಬ್ಬಂದಿಗೆ 1.64 ಕೋಟಿ ರೂ. ವಂಚಿಸಿದ್ದ ಮುಂಬೈನ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಆಭರಣಗಳ ಫೋಟೋ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಹೋದವರು ಅಲ್ಲಿಂದಲೇ ಚಿನ್ನದೊಂದಿಗೆ ಪರಾರಿಯಾಗಿದ್ದರು.
ಮುಂಬೈನ ಪರೇಶ್ ಸೋನಿ (49) ಹಾಗೂ ಪ್ರವೀಣ್ ಅಲಿಯಾಸ್ ಪಪ್ಪು(44) ಬಂಧಿತರು. ಶ್ಯಾಮ್ ಹಾಗೂ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಮೇ 16ರಂದು ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದ್ದ ಕಚೇರಿಯೊಂದರಲ್ಲಿ ಈ ಕೃತ್ಯ ನಡೆದಿತ್ತು. ಬಂಧಿತರಿಂದ 1.64 ಕೋಟಿ ರೂ. ಮೌಲ್ಯದ 1.08 ಕೆ.ಜಿ ಚಿನ್ನಜಪ್ತಿ ಮಾಡಲಾಗಿದೆ.
ಆರೋಪಿಗಳು ಮುಂಬೈನ ಜವಾರಿ ಬಜಾರ್ ಸೇರಿ ಹಲವು ಕಡೆ ಆಭರಣಗಳನ್ನು ಮಾರಾಟ ಮಾಡಿದ್ದರು. ನಗರ್ತಪೇಟೆಯ ಮೆಹ್ತಾ ಗೋಲ್ಡ್ ಮಳಿಗೆಯ ಮಾರಾಟ ವಿಭಾಗದ ವ್ಯವಸ್ಥಾಪಕರಾಗಿ ಮಹೇಂದ್ರ ಕುಮಾರ್ ಜೈನ್ ಹಾಗೂ ಸಹಾಯಕ ವ್ಯವಸ್ಥಾಪಕರಾಗಿ ಗೌತಮ್ ಕೆಲಸ ಮಾಡುತ್ತಿದ್ದರು. ಮಲ್ಲೇಶ್ವರದಲ್ಲಿ ಮಾಹಿ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಆರೋಪಿ ಪರೇಶ್ ಸೋನಿ ಮಳಿಗೆ ತೆರೆದಿದ್ದ. ಮೇ 16ರಂದು ಗೌತಮ್‌ಗೆ ಕರೆ ಮಾಡಿ ತಮ್ಮ ಸಂಸ್ಥೆಗೆ ಆಭರಣಗಳು ಬೇಕಾಗಿವೆ ಎಂಬುದಾಗಿ ಹೇಳಿದ್ದ. ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಕಚೇರಿಗೆ ಚಿನ್ನಾಭರಣಗಳ ಮಾದರಿಯನ್ನು ತಂದು ತೋರಿಸುವಂತೆ ಕೋರಿದ್ದರು. ಮಹೇಂದ್ರ ಕುಮಾರ್ ಜೈನ್ ಮತ್ತು ಸಿಬ್ಬಂದಿ ಪ್ರಕಾಶ್ ಮಲ್ಲೇಶ್ವರದಲ್ಲಿರುವ ಕಚೇರಿಗೆ ಆಭರಣಗಳ ಜತೆಗೆ ಬಂದಿದ್ದರು.
ಆರೋಪಿಗಳಾದ ಪರೇಶ್ ಸೋನಿ, ಶ್ಯಾಮ್ ಹಾಗೂ ಚಂದ್ರಶೇಖರ್ ಚಿನ್ನಾಭರಣಗಳ ಮಾದರಿಯನ್ನು ನೋಡಿಳ ಫೋಟೋ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಆಭರಣಗಳನ್ನು ಕೊಂಡೊಯ್ದಿದ್ದರು. ಕೆಲ ಸಮಯ ಕಳೆದಾಗ ಕೋಣೆಯ ಒಳಗೆ ಹೋದರೆ ಆಭರಣ ಸಹಿತ ಆರೋಪಿಗಳು ನಾಪತ್ತೆ ಆಗಿದ್ದರು. ಮಹೇಂದ್ರ ಕುಮಾರ್ ಡಿ. ಜೈನ್ ಪೊಲೀಸ್‌ಗೆ ದೂರು ನೀಡಿದ್ದರು.


