ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.
ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಜಿಲೆಟಿನ್ ಬಳಸಿ ಸ್ಪೋಟಿಸಲಾಗಿದ್ದು, ತಮಿಳುನಾಡು ಮೂಲದ ಕಳ್ಳರ ಕೈವಾಡದ ಶಂಕೆಯಿದೆಯೇ ಎಂದು ಕೇಳಿದಾಗ, ನನಗೂ ಕೆಲವು ಮಾಹಿತಿ ಬರುತ್ತಿದೆ. ಅರಣ್ಯ ಸಚಿವರು ತನಿಖೆ ಮಾಡಿಸುತ್ತಿದ್ದಾರೆ. ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ವರದಿ ಬಂದ ಬಳಿಕ ಮಾಹಿತಿ ನೀಡುತ್ತೇವೆ ಎಂದರು.
ಹನೂರಿನ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಮೂವರು ಬೇಟೆಗಾರರು ಬಲಿಯಾಗಿದ್ದು, ಈ ಪ್ರಕರಣ ಸ್ಥಳೀರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಪಕ್ಷ ಬಿಜೆಪಿ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರಕರಣದ ಕುರಿತಂತೆ ಉಪವಿಭಾಗಧಿಕಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ತನಿಖೆ ಆರಂಭಗೊಂಡಿದ್ದು, ಗುಂಡಿಗೆ ಬಲಿಯಾದವರು ರೈತರಲ್ಲ ಬೇಟೆಗಾರರು ಎಂದು ಅರಣ್ಯ ಸಿಬ್ಬಂದಿ ಸಾಕ್ಷಿಗಳನ್ನು ನೀಡಿದ್ದಾರೆ. ಈ ಸಾವಿಗೆ ನ್ಯಾಯ ಕೊಡಿ ಎಂದು ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ರೈತರು ದನ ಮೇಯಿಸೋದಕ್ಕೆ ಹೋಗಿದ್ದರು, ಉದ್ದೇಶ ಪೂರ್ವಕವಾಗಿಯೇ ಅಧಿಕಾರಿಗಳು ನಕಲಿ ಎನ್‌ಕೌಂಟರ್ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೇಟೆಗಾರರಿಂದ ವಶಕ್ಕೆ ಪಡೆದ ಮಾಂಸ, ಬಂದೂಕು ಸೇರಿದಂತೆ ಇನ್ನಿತರ ವಸ್ತುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಜರುಪಡಿಸಿ ನಕಲಿ ಎನ್‌ಕೌಂಟರ್ ಅಲ್ಲ ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ. ಕೊಳ್ಳೇಗಾಲದ ಉಪವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ ಅವರಿಗೆ ಜಿಲ್ಲಾಧಿಕಾರಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ತನಿಖಾ ವರದಿಗೆ ಸಲ್ಲಿಕೆಗೆ 7 ದಿನ ಅವಕಾಶ ನೀಡಿದ್ದಾರೆ.
ಅರಣ್ಯಾಧಿಕಾರಿಗಳ ಗುಂಡೇಟಿಗೆ ಬಲಿಯಾದ ಮೂವರು ತಮಿಳಿಗರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ.


