ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ‘ವೆಟ್ರಿ ಪಯಣಂ’ಗೆ ಚಾಲನೆ ನೀಡಿದ ಸಿಎಂ ವಿಜಯ್!
ಚೆನ್ನೈ: ತಮಿಳುನಾಡಿನಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವ ಮಹತ್ತ್ವಾಕಾಂಕ್ಷೆಯ ‘ವೆಟ್ರಿ ಪಯಣಂ’ ಯೋಜನೆಗೆ ಮುಖ್ಯಮಂತ್ರಿ ಎಸ್. ಜೋಸೆಫ್ ವಿಜಯ್ ಅವರು ಅಧಿಕೃತ ಚಾಲನೆ ನೀಡಿದರು.
ಮಹಾತ್ಮ ಗಾಂಧೀಜಿಯವರ ಜನ್ಮದಿನದ ವಿಶೇಷ ದಿನವಾದ ಇಂದು ಚೆನ್ನೈನ ಕೋಯಂಬೇಡು ಬಸ್ ನಿಲ್ದಾಣದಲ್ಲಿ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ವಿಜಯ್ ಅವರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಚೆನ್ನೈನಿಂದ ಕಾಂಚೀಪುರಂಗೆ ತೆರಳುವ (76B) ಸರ್ಕಾರಿ ಬಸ್ ಏರಿ, ಮಹಿಳೆಯರಿಗೆ ಮೊದಲ ಉಚಿತ ಟಿಕೆಟ್‌ಗಳನ್ನು ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಈ ವೇಳೆ ಸಿಎಂಗೆ ಮಹಿಳೆಯರು ಸಿಹಿ ತಿನ್ನಿಸಿ ತಮ್ಮ ಹರ್ಷ ವ್ಯಕ್ತಪಡಿಸಿದರು.
ಯೋಜನೆಯ ವಿಶೇಷತೆಗಳು:
ಎಲ್ಲಾ ಬಸ್‌ಗಳಿಗೂ ವಿಸ್ತರಣೆ: ಹಿಂದಿನ ಆಡಳಿತದಲ್ಲಿ ಕೇವಲ ಸಾಮಾನ್ಯ ಬಸ್‌ಗಳಿಗೆ ಮಾತ್ರ ಸೀಮಿತವಾಗಿದ್ದ ಉಚಿತ ಪ್ರಯಾಣ ಯೋಜನೆಯನ್ನು ವಿಸ್ತರಿಸಿ, ಟಿವಿಕೆ (TVK) ಸರ್ಕಾರದಲ್ಲಿ ಎಕ್ಸ್‌ಪ್ರೆಸ್, ಡಿಲಕ್ಸ್ ಹಾಗೂ ಎಸಿ ಬಸ್‌ಗಳು ಸೇರಿದಂತೆ ಒಟ್ಟು 12,692 ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಈ ಯೋಜನೆಯನ್ನು ಪಡೆಯಲು ಯಾವುದೇ ಆದಾಯ ಮಿತಿ ಅಥವಾ ದಿನನಿತ್ಯದ ಪ್ರಯಾಣದ ಮಿತಿಯಂತಹ ಯಾವುದೇ ನಿರ್ಬಂಧಗಳಿಲ್ಲ.ರಾಜ್ಯದ ಸುಮಾರು 84.32 ಲಕ್ಷಕ್ಕೂ ಅಧಿಕ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಪ್ರತಿದಿನ ಉಚಿತ ಪ್ರಯಾಣದ ಪ್ರಯೋಜನ ದೊರೆಯಲಿದೆ. ಸಮಾಜದ ಕಟ್ಟಕಡೆಯ ಮಹಿಳಾರಿಗೂ ಸಾರಿಗೆ ಸೌಲಭ್ಯ ಸಿಗಬೇಕೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರವು ಈ ಯೋಜನೆಯನ್ನು ಅಂದಾಜು 6,000 ಕೋಟಿ ರೂ.ಗಳ ವೆಚ್ಚದಲ್ಲಿ ಜಾರಿಗೆ ತಂದಿದೆ.
ಚುನಾವಣಾ ಸಮಯದಲ್ಲಿ ನೀಡಿದ್ದ ಭರವಸೆಯಂತೆ ಗಾಂಧಿ ಜಯಂತಿಯಂದೇ ಈ ಜನಪರ ಯೋಜನೆ ಜಾರಿಗೆ ಬಂದಿರುವುದು ತಮಿಳುನಾಡಿನ ಮಹಿಳಾ ವರ್ಗದಲ್ಲಿ ತೀವ್ರ ಹರ್ಷ ಮೂಡಿಸಿದೆ.
#VetriPayanam #CMVijay #ThalapathyVijay #TamilNaduNews #FreeBusTravel #WomenEmpowerment #TVK #UdayakalaNews #TamilNaduGovernment #GandhiJayanti

