ನವದೆಹಲಿ: ಜೀವದ ಹಂಗು ತೊರೆದು, ಫ್ಲೈದುಬೈ (flydubai) ವಿಮಾನದಲ್ಲಿದ್ದ 180 ಪ್ರಯಾಣಿಕರ ಪ್ರಾಣ ಕಾಪಾಡಿದ ಭಾರತೀಯ ಸಾಹಸಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರ ಧೈರ್ಯವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಸಾಹಸ ಮೆಚ್ಚಿ ಪ್ರಮುಖ ಔಷಧ ತಯಾರಿಕಾ ಕಂಪನಿಯಾದ ‘ಮ್ಯಾನ್‌ಕೈಂಡ್ ಫಾರ್ಮಾ’ (Mankind Pharma) ವತಿಯಿಂದ ಅವರಿಗೆ 1 ಕೋಟಿ ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಲಾಗಿದೆ.
ಘಟನೆಯ ಹಿನ್ನೆಲೆ
ದುಬೈನಿಂದ ಟೆಲ್ ಅವಿವ್‌ಗೆ ಸಂಚರಿಸುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸುವ ವಿಫಲ ಯತ್ನ ನಡೆದಿತ್ತು. ವಿಮಾನದ ಸಹ-ಪೈಲಟ್‌ನಿಂದ ಚಾಕು ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರೂ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತಮ್ಮ ಪ್ರಾಣದ ಹಂಗು ತೊರೆದು ವಿಮಾನ ಸುರಕ್ಷಿತವಾಗಿ ಸೌದಿ ಅರೇಬಿಯಾದಲ್ಲಿ ಲ್ಯಾಂಡ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಈ ಅಸಾಧಾರಣ ಧೈರ್ಯ, ಸಂಯಮ ಮತ್ತು ಮಾನವೀಯತೆಯನ್ನು ಗುರುತಿಸಿ ಕಂಪನಿಯು ಈ ಗೌರವ ಸಲ್ಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಗಣ್ಯರು ಸ್ಮಿತ್ ಮಚ್ಚಾರ್ ಅವರ ಸಾಹಸವನ್ನು ಪ್ರಶಂಸಿ, ಶುಭ ಹಾರೈಸಿದ್ದಾರೆ.
ಮ್ಯಾನ್‌ಕೈಂಡ್ ಫಾರ್ಮಾ ಎಂಡಿ ಮೆಚ್ಚುಗೆ
ಮ್ಯಾನ್‌ಕೈಂಡ್ ಫಾರ್ಮಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಜುನೇಜಾ ಅವರು ಸ್ಮಿತ್ ಮಚ್ಚಾರ್ ಅವರಿಗೆ ಪ್ರಶಂಸಾ ಪತ್ರ ಬರೆದಿದ್ದಾರೆ. ‘ಒಬ್ಬ ಭಾರತೀಯನಾಗಿ, ಜಾಗತಿಕ ಮಟ್ಟದಲ್ಲಿ ಇಂತಹ ಅಪ್ರತಿಮ ಧೈರ್ಯ ಮತ್ತು ಜವಾಬ್ದಾರಿಯನ್ನು ಪ್ರದರ್ಶಿಸುವುದನ್ನು ನೋಡಿ ನಮಗೆ ಅಪಾರ ಹೆಮ್ಮೆಯಾಗಿದೆ’ ಎಂದು ತಿಳಿಸಿದ್ದಾರೆ.
‘ನೀವು ರಕ್ಷಿಸಿದ ಜೀವಗಳ ಮೌಲ್ಯಕ್ಕಾಗಲಿ ಅಥವಾ ಲಕ್ಷಾಂತರ ಜನರಿಗೆ ನೀವು ನೀಡಿದ ಸ್ಫೂರ್ತಿಗಾಗಲಿ ಯಾವುದೇ ಹಣದ ಮೊತ್ತವು ಸಾಟಿಯಾಗಲಾರದು. ನಿಮ್ಮ ಧೈರ್ಯ ಮತ್ತು ಮಾನವೀಯತೆಗೆ ನಮ್ಮ ಕೃತಜ್ಞತೆಯ ಸಂಕೇತವಾಗಿ ಈ ಕೊಡುಗೆಯನ್ನು ಸಮರ್ಪಿಸುತ್ತಿದ್ದೇವೆ’ ಎಂದು ಜುನೇಜಾ ಉಲ್ಲೇಖಿಸಿದ್ದಾರೆ. ಭಾರತಕ್ಕೆ ಕೀರ್ತಿ ತಂದಿದ್ದಲ್ಲದೆ, ತನ್ನ ಸ್ವಾರ್ಥಕ್ಕಿಂತ ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ ಕ್ಯಾಪ್ಟನ್ ಸ್ಮಿತ್‌ಗೆ ಇಡೀ ದೇಶವೇ ನಮಸ್ಕರಿಸುತ್ತದೆ ಎಂದು ಅವರು ಕೊಂಡಾಡಿದ್ದಾರೆ.
#SmitMachchhar #Flydubai #IndianPilot #MankindPharma #BraveryAward #UdayakalaNews #SaudiArabia #DubaiToTelAviv #PilotHero


