ಬೆಂಗಳೂರು: ಏಷ್ಯನ್ ಗೇಮ್ಸ್‌ನ ಮಹಿಳೆಯರ 4×400 ಮೀಟರ್ ರಿಲೇ ಓಟದಲ್ಲಿ ಚಿನ್ನ ಹಾಗೂ ಮಿಶ್ರ 4×400 ಮೀಟರ್ ರಿಲೇ ಓಟದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಕರ್ನಾಟಕದ ಹೆಮ್ಮೆಯ ಖ್ಯಾತ ಓಟಗಾರ್ತಿ ಎಂ.ಆರ್. ಪೂವಮ್ಮಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.ಕರ್ನಾಟಕದ ಕ್ರೀಡಾಪಟುಗಳ ಪ್ರತಿಭೆಗೆ ಸದಾ ಬೆಂಬಲ ನೀಡಲು ಮತ್ತು ಅಥ್ಲೀಟ್‌ಗಳು ಇನ್ನಷ್ಟು ಉನ್ನತ ಮಟ್ಟಕ್ಕೇರಲು ಶಕ್ತಿ ತುಂಬಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಪುನರುಚ್ಚರಿಸಿದ್ದಾರೆ.
ಪ್ರೋತ್ಸಾಹ ಧನದ ಬಗ್ಗೆ ಪೂವಮ್ಮ ಅಸಮಾಧಾನ
ಪದಕಗಳೊಂದಿಗೆ ಇತ್ತೀಚೆಗೆ ಮಂಗಳೂರಿಗೆ ಬಂದಿಳಿದ ಎಂ.ಆರ್. ಪೂವಮ್ಮ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ, ದೇಶಕ್ಕೆ ಪದಕ ತಂದುಕೊಟ್ಟಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದರೂ, ಸರ್ಕಾರದಿಂದ ಸಿಗುತ್ತಿರುವ ನಿರೀಕ್ಷಿತ ಪ್ರೋತ್ಸಾಹದ ಬಗ್ಗೆ ಬೇಸರ ಹೊರಹಾಕಿದ್ದರು.
ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸರ್ಕಾರದಿಂದ ಕ್ರೀಡಾಪಟುಗಳಿಗೆ ಸಿಗುತ್ತಿರುವ ಆರ್ಥಿಕ ಬೆಂಬಲ ಕಡಿಮೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇತರೆ ರಾಜ್ಯಗಳು ಚಿನ್ನದ ಪದಕ ವಿಜೇತರಿಗೆ ಕೋಟ್ಯಂತರ ರೂ. ಪ್ರೋತ್ಸಾಹ ಧನ ನೀಡುತ್ತಿರುವುದನ್ನು ಉದಾಹರಿಸಿದರು. ಕರ್ನಾಟಕ ಸರ್ಕಾರವು ನೀಡುತ್ತಿರುವ ಬಹುಮಾನದ ಮೊತ್ತವನ್ನು ಹೆಚ್ಚಿಸಬೇಕು ಹಾಗೂ ಎಲ್ಲಾ ಕ್ರೀಡಾಪಟುಗಳನ್ನು ಸಮರ್ಥವಾಗಿ ಪ್ರೋತ್ಸಾಹಿಸಬೇಕು ಎಂದು ಅವರು ಈ ವೇಳೆ ಮುಖ್ಯಮಂತ್ರಿ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದರು.
2 ಪದಕ
ಮಹಿಳೆಯರ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಕಿರಣ್ ಪಹಲ್, ಪ್ರಾಚಿ ಚೌಧರಿ ಮತ್ತು ವಿಥ್ಯಾ ರಾಮರಾಜ್ ಅವರೊಂದಿಗೆ ಭಾರತ ತಂಡ ಚಿನ್ನದ ಪದಕ ಗೆದ್ದರೆ, 4×400 ಮೀಟರ್ ಮಿಶ್ರ ರಿಲೇ ಸ್ಪರ್ಧೆಯಲ್ಲಿ ಮನು ಟಿ.ಎಸ್, ವಿಶಾಲ್ ಟಿ.ಕೆ ಹಾಗೂ ವಿಥ್ಯಾ ರಾಮರಾಜ್ ಜೊತೆಗೂಡಿ ಓಡಿದ ಪೂವಮ್ಮ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
#MRPoovamma #DKShivakumar #AsianGames #KarnatakaAthletes #GoldMedal #SilverMedal #UdayakalaNews #SportsNews #Relay1stPlace


