Menu

ಅಹಿಂದ ಕೈಗೆ ನಿಜವಾದ ಅಧಿಕಾರ ಮುನ್ನವೇ ನಾಯಕನ ನಿರ್ಗಮನ

ರಾಜ್ಯದಲ್ಲಿ ಅಹಿಂದ ವರ್ಗಕ್ಕೆ ನಿಜವಾದ ಅಧಿಕಾರ ಸಿಗಬೇಕೆಂದು ಕಳೆದ ೫೦ ವರ್ಷಗಳಿಂದ ರಾಜಕೀಯ ಹೋರಾಟ ನಡೆಸುತ್ತ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಿ ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಇರುವುದಾಗಿ ಪ್ರಕಟಿಸಿದ್ದಾರೆ. ಇದು ಹಿಂದುಳಿದ ವರ್ಗಗಳಿಗೆ ತಂದ ಬೇಸರದ ಸಂಗತಿ ಎಂಬುದರಲ್ಲಿ ಎರಡು ಮಾತಿಲ್ಲ.

ಸಿದ್ದರಾಮಯ್ಯ ಆಡಳಿತ ಸರಿಯಾಗಿಲ್ಲ ಎಂದು ಯಾರೂ ಹೇಳಿಲ್ಲ. ಸಿದ್ದರಾಮಯ್ಯ ಮೇಲೆ ಯಾವ ಗಂಭೀರ ಆರೋಪ ಇಲ್ಲ. ಅಧಿಕಾರಕ್ಕೆ ಬರುವಾಗ ಅಧಿಕಾರ ಬಿಟ್ಟುಕೊಡುವುದಾಗಿ ವಚನ ನೀಡಿದ್ದರು ಎಂದು ಹೇಳುವ ಮಾತಿಗೆ ಆಧಾರವೂ ಇಲ್ಲ. ದಶರಥ ಕೈಕೇಯಿಗೆ ಕೊಟ್ಟ ಮಾತಿಗೆ ರಾಮನಿಗೆ ವನವಾಸ ವಾದಂತೆ ಸಿದ್ದರಾಮಯ್ಯ ಅಧಿಕಾರ ತ್ಯಜಿಸಿದ್ದಾರೆ. ಕೇಳಿದರೆ ಹೈಕಮಾಂಡ್ ಹೇಳಿದೆ ಎಂದು ಹೇಳುತ್ತಿದ್ದಾರೆ. ಹೈಕಮಾಂಡ್ ಕೂಡ ಉತ್ತಮ ಆಡಳಿತ ನಡೆಸುವವರನ್ನು ಕೈಬಿಡುತ್ತಿರುವುದು ನಿಜಕ್ಕೂ ಸೋಜಿಗದ ಸಂಗತಿ.

ಕಾಂಗ್ರೆಸ್ ಈಗಾಗಲೇ ಬೇರೆ ರಾಜ್ಯಗಳಲ್ಲಿ ನೆಲಕಚ್ಚಿದೆ. ಕರ್ನಾಟಕದಲ್ಲೂ ಪಕ್ಷದಲ್ಲಿ ಬಿರುಕು ಮೂಡಿದರೆ ನಿಭಾಯಿಸುವುದು ಕಷ್ಟ. ಈಗಾಗಲೇ ದಾವಣಗೆರೆ ಉಪ ಚುನಾವಣೆಯಲ್ಲಿ ಮುಸ್ಲಿಮರು ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಈಗ ಜಾತಿ ಗಣತಿ ಯಂತೆ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಸಾಬೀತಾಗಿದೆ. ಕೈ ಮುಸ್ಲಿಮರನ್ನು ಓಲೈಸಿದರೆ ಅದಕ್ಕೆ ವಿರುದ್ಧವಾಗಿ ಹಿಂದೂಗಳ ಕ್ರೋಡೀಕರಣಕ್ಕೆ ಬಿಜೆಪಿ ಕೈಹಾಕುವುದು ಸಹಜ. ಆಗ ಮತ್ತೆ ಕಾಂಗ್ರೆಸ್ ಓಟು ಬ್ಯಾಂಕ್ ಒಡೆದು ಹೋಗುತ್ತದೆ. ಇಂದಿರಾ ಗಾಂಧಿ ಅವರ ೫ ಅಂಶಗಳ ಕಾರ್ಯಕ್ರಮ ಆರ್ಥಿಕವಾಗಿ ಹಿಂದುಳಿದವರಿಗೆ ಸಹಕಾರಿಯಾಗಿತ್ತು. ಈಗ ೫ ಗ್ಯಾರಂಟಿಗಳು ಹೊಸ ಓಟ್ ಬ್ಯಾಂಕ್ ಸೃಷ್ಟಿಸಿದೆ. ಹಿಂದು-ಮುಸ್ಲಿಂ ವಿಭಜನೆಯಾದಲ್ಲಿ ಈ ಮತ ಬ್ಯಾಂಕ್ ಒಡೆದು ಹೋಗುವುದು ಖಚಿತ. ಅದರಿಂದ ಆರ್ಥಿಕ ಆಧಾರದ ಮೇಲೆ ಕಾರ್ಯಕ್ರಮಗಳನ್ನು ರೂಪಿಸಿದರೆ ಮಾತ್ರ ಕೈ ಪಾರಾಗಬಹುದು. ಮುಸ್ಲಿಂ ಮತಗಳು ಬಿಜೆಪಿಗೆ ಹೋಗುವುದಿಲ್ಲ ಎಂದು ಕಡೆಗಣಿಸಲು ಬರುವುದಿಲ್ಲ. ಬಕ್ರಿದ್‌ನಲ್ಲಿ ಗೋವುಗಳನ್ನು ಕಡಿಯೋಲ್ಲ ಎಂದು ಮುಸ್ಲಿಮರು ತೀರ್ಮಾನಿಸಿದ್ದು ಮಹತ್ತರ ಬೆಳವಣಿಗೆ.

ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಯಾವ ರೀತಿ ಬಳಸಿಕೊಳ್ಳುತ್ತದೆ ಎಂಬುದರ ಮೇಲೆ ಅಹಿಂದ ಮತ ಬ್ಯಾಂಕ್ ಉಳಿಯುತ್ತದೆ. ಒಂದು ವೇಳೆ ಸಿದ್ದರಾಮಯ್ಯ ಮುಸ್ಲಿಮರು ಮತ್ತು ಅಹಿಂದ ಬೆಂಬಲದಿಂದ ಬೇರೆ ಪಕ್ಷ ಕಟ್ಟಿದರೆ ಆಗ ಎಲ್ಲ ರಾಜಕೀಯ ಪಕ್ಷಗಳಿಗೂ ಕಷ್ಟ. ಇದುವರೆಗೆ ಸಿದ್ದರಾಮಯ್ಯ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಅಧಿಕಾರ ಹೋದ ಮೇಲೆ ಏನು ಮಾಡುತ್ತಾರೆ ಎಂದು ಹೇಳುವುದು ಕಷ್ಟ. ಅವರು ವಿಧಾನಸೌಧದ ಹೊರಗೆ ಇದ್ದವರಲ್ಲ. ಈಗಾಗಲೇ ಹಿಂದುಳಿದ ವರ್ಗ ಆಕ್ರೋಶ ವ್ಯಕ್ತಪಡಿಸಿದೆ. ಹಿಂದೆ ಸಿದ್ದರಾಮಯ್ಯ ಜೆಡಿಎಸ್ ತೊರೆಯಲು ಇದೇ ಅಹಿಂದ ಕಾರಣವಾಗಿತ್ತು. ಈಗ ಅದೇ ಕಾರಣವಾಗಬಹುದು. ದೇವರಾಜ ಅರಸು ಹಿಂದುಳಿದ ವರ್ಗಗಳಲ್ಲಿ ಆರ್ಥಿಕ ಸ್ವಾತಂತ್ರ್ಯ ಕೊಡಿಸಲು ಭೂಸುಧಾರಣೆ ಕಾಯ್ದೆ ಜಾರಿಗೆ ತಂದರು. ಅವರು ಕೂಡ ಇಂದಿರಾ ವಿರುದ್ಧ ಪ್ರತ್ಯೇಕ ಪಕ್ಷ ಕಟ್ಟಲು ಹೋಗಿ ವಿಫಲರಾದರು. ಅದೇ ತಪ್ಪನ್ನು ಸಿದ್ದರಾಮಯ್ಯ ಮಾಡುವುದಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿರುವವರೆಗೆ ಅಹಿಂದ ಕೂಡ ಇರುತ್ತದೆ.

ಬಂಗಾರಪ್ಪನವರನ್ನು ತೆಗೆದಾಗಲೂ ಇದೇ ಸಮಸ್ಯೆ ತಲೆದೋರಿತ್ತು. ವಿರೇಂದ್ರ ಪಾಟೀಲರನ್ನು ಕೈಬಿಟ್ಟಾಗ ಲಿಂಗಾಯತ ಓಟು ಕೈಬಿಟ್ಟು ಹೋಯಿತು. ಈಗ ಅದಾಗದಂತೆ ಕಾಪಾಡಿಕೊಳ್ಳಲು ೪ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ಈಗ ಪ್ರಾದೇಶಿಕ ಪಕ್ಷಗಳೊಂದಿಗೆ ಪೈಪೋಟಿಗೆ ಇಳಿದಿದೆ. ಇದರಿಂದ ರಾಷ್ಟ್ರೀಯ ಪಕ್ಷಗಳೇ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಅಪಾಯ ತಲುಪಿದೆ.

Related Posts

Leave a Reply

Your email address will not be published. Required fields are marked *