ಸಿಎಂ ಸಿದ್ದರಾಮಯ್ಯ ಮಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದಕ್ಕೆ ಮೊದಲೇ ಅವರ ಆಪ್ತ ಅಧಿಕಾರಿಗಳ ವರ್ಗಾವಣೆ ನಡೆದಿದೆ. ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ , ಸಿಎಂ ವಿಶೇಷ ಕರ್ತವ್ಯಾಧಿಕಾರಿ ರಮೇಶ್ ಪಿ.ಕೋನರೆಡ್ಡಿ, ಸಿಎಂ ಜಂಟಿ ಕಾರ್ಯದರ್ಶಿ ಟಿ.ಎನ್.ಕೃಷ್ಣಮೂರ್ತಿ ಹಾಗೂ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿಯಾಗಿದ್ದ ಕೆಎಎಸ್ ಅಧಿಕಾರಿ ಡಾ.ವೆಂಕಟೇಶಯ್ಯ ಅವರನ್ನು ವರ್ಗಾವಣೆ ಕೃಷಿ ಮಾರಾಟ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ರಮೇಶ್ ಪಿ.ಕೋನರೆಡ್ಡಿ ಅವರನ್ನು ವಿದ್ಯುತ್ ಪ್ರಸರಣ ನಿಗಮದ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಸಿದ್ದರಾಮಯ್ಯ ಅಧಿಕಾರ ತ್ಯಜಿಸುವ ಮೊದಲೇ ಆಪ್ತ ಅಧಿಕಾರಿಗಳನ್ನು ಆಯ ಕಟ್ಟಿನ ಸ್ಥಳಗಳಿಗೆ ನಿಯೋಜನೆಗೊಳಿಸಿದ್ದಾರೆ.
ಸಿಎಂ ಜಂಟಿ ಕಾರ್ಯದರ್ಶಿಯಾಗಿದ್ದ ಟಿ.ಎನ್.ಕೃಷ್ಣಮೂರ್ತಿ ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ-2 ಹುದ್ದೆಗೆ ವರ್ಗಾವಣೆಗೊಂಡಿದ್ದರೆ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಕ್ರೈಸ್ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗೆ ನಿಯುಕ್ತಿಗೊಂಡಿದ್ದಾರೆ.
2023ರಲ್ಲಿ ಎರಡನೇ ಬಾರಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೆಎಎಸ್ ಅಧಿಕಾರಿ ಡಾ. ವೆಂಕಟೇಶಯ್ಯ ಅವರನ್ನು ಗುತ್ತಿಗೆ ಆಧಾರದ ಮೇಲೆ ಸಿಎಂ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಕೆಎಎಸ್(ಹಿರಿಯ ಶ್ರೇಣಿ) ಅಧಿಕಾರಿಯಾಗಿರುವ ರಮೇಶ್ ಪಿ.ಕೋನರೆಡ್ಡಿ ಅವರನ್ನು ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸಲಾಗಿತ್ತು.


