Menu

ತಾರ್ಕಿಕ ಅಂತ್ಯ ಕಾಣದ ಬಿಟ್ ಕಾಯಿನ್ ದಂಧೆ

bitcoin

ದೇಶ ವಿದೇಶಗಳಲ್ಲಿ  ಬಿಟ್ ಕಾಯಿನ್ ದಂಧೆಯನ್ನು ತೆರೆಮರೆಯಲ್ಲಿ ಮುಂದುವರಿಸಿರುವ ನಾಡಿನ ಪ್ರಭಾವಿ ವ್ಯಕ್ತಿಗಳ ವ್ಯವಹಾರ ಮತ್ತು ವಹಿವಾಟಿಗೆ ಭಾದಕ ಆಗದ ರೀತಿಯಲ್ಲಿ ಎಸ್‌ಐಟಿ ಅತಿ ಜಾಣ್ಮೆಯಿಂದ ಬಿಟ್ ಕಾಯಿನ್ ಪ್ರಕರಣದ ಬಿ ರಿಪೋರ್ಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದರಲ್ಲಿ ಹೊಸದೇನೂ ಇಲ್ಲ. ಸಾಕ್ಷ್ಯಗಳ ಕೊರತೆ ಎಂಬುದನ್ನು ತನಿಖಾಧಿಕಾರಿಗಳು ಅತಿ ನಾಜೂಕಿನಿಂದ ತಮ್ಮ ರಕ್ಷಣೆಗೆ ಬಳಸಿಕೊಂಡು ಭ್ರಷ್ಟರು ಮತ್ತು ವಂಚಕರನ್ನು ಕಾನೂನಿನ ಕುಣಿಕೆಯಿಂದ ತಪ್ಪಿಸಲು ತುಳಿದ ಕಾನೂನಿನ ಜಾಣ ಮಾರ್ಗವೂ ಇದು.

ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ಭಾರಿ ಸದ್ದು ಮಾಡಿ ಚರ್ಚೆಗೆ ಗ್ರಾಸವಾಗಿದ್ದ ಬಿಟ್ ಕಾಯಿನ್ ಎಸ್‌ಐಟಿ ತನಿಖೆ ಪೂರ್ಣಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ . ಸಕಾಲದಲ್ಲಿ ಸರ್ಕಾರದಿಂದ ದೊರಕದ ಅನುಮತಿ ಹಾಗೂ ಸಾಕ್ಷ್ಯಗಳ ಕೊರತೆ ಕಾರಣದಿಂದ ಪ್ರಮುಖ ಅಧಿಕಾರಿಗಳ ಮೇಲಿದ್ದ ಗುರುತರ ಆರೋಪಗಳ ಸೂಕ್ತ ತನಿಖೆಯಿಲ್ಲದೆ ಅವರಿಗೆ ಕ್ಲೀನ್‌ಚಿಟ್ ನೀಡುವ ಮಾದರಿಯಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ.

ಕೆಲವು ರಾಜಕಾರಣಿಗಳು ಮತ್ತು ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಹೊಂದಿರುವ ಅಧಿಕಾರಿಗಳ ಮೇಲಿನ ಆರೋಪಗಳು ನಿಜಕ್ಕೂ ಗುರುತರ ಮತ್ತು ಅತಿ ಪ್ರಮುಖವಾಗಿತ್ತು. ದುರಂತ ಎಂದರೆ ಇವುಗಳ ತನಿಖೆಗೆ ಸರ್ಕಾರದಿಂದ ಸಕಾಲದಲ್ಲಿ ಅನುಮತಿ ದೊರಕದೇ ಹೋಗಿದ್ದು. ಬಿಟ್ ಕಾಯಿನ್ ದಂಧೆಯ ಹಿಂದೆ ಇರುವ ಕರಾಳ ಮುಖಗಳನ್ನು ಬಯಲಿಗೆಳೆಯಲು ಎಸ್‌ಐಟಿ ವಿಫಲವಾಗಿದ್ದು.

ದೇಶ ವಿದೇಶಗಳಲ್ಲಿ ಇದರ ದಂಧೆಯನ್ನು ತೆರೆಮರೆಯಲ್ಲಿ ಮುಂದುವರಿಸಿರುವ ನಾಡಿನ ಪ್ರಭಾವಿ ವ್ಯಕ್ತಿಗಳ ವ್ಯವಹಾರ ಮತ್ತು ವಹಿವಾಟಿಗೆ ಭಾದಕ ಆಗದ ರೀತಿಯಲ್ಲಿ ಎಸ್‌ಐಟಿ ಅತಿ ಜಾಣ್ಮೆಯಿಂದ ಈ ಬಗೆಯ ಬಿ ರಿಪೋರ್ಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ಇಂದು ಹೊಸದೇನೂ ಅಲ್ಲ. ಇಲ್ಲಿ ಸಾಕ್ಷ್ಯಗಳ ಕೊರತೆ ಎಂಬುದನ್ನು ತನಿಖಾಧಿಕಾರಿಗಳು ಅತಿ ನಾಜೂಕಿನಿಂದ ತಮ್ಮ ರಕ್ಷಣೆಗೆ ಬಳಸಿಕೊಂಡು ಭ್ರಷ್ಟರು ಮತ್ತು ವಂಚಕರನ್ನು ಕಾನೂನಿನ ಕುಣಿಕೆಯಿಂದ ತಪ್ಪಿಸಲು ಬಳಸುವ ಜಾಣ ಮಾರ್ಗ .

ಸರ್ಕಾರದ ಕುಮ್ಮಕ್ಕು ಮತ್ತು ಬೆಂಬಲ ಮತ್ತು ಷಾಮೀಲು ಇಲ್ಲದೆ ಸಮಾಜದ ಕಣ್ಣಿಗೆ ಕಾಣದ ವಂಚಕರನ್ನು ಕಾನೂನಿನ ಕುಣಿಕೆಯಿಂದ ರಕ್ಷಿಸಲು ಹೇಗೆ ಸಾದ್ಯ? ತನಿಖಾಧಿಕಾರಿಗಳಿಗೆ ಸಾಕ್ಷಿಗಳು ಸಿಗಲಿಲ್ಲ ಎನ್ನುವುದಕ್ಕಿಂತ ಗುರುತರ ಪುರಾವೆಗಳಿದ್ದರೂ ಈ ಸಂಗತಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂಬುದು ಅತಿ ಮುಖ್ಯ. ಅಲ್ಲದೆ ಉದ್ದೇಶಪೂರ್ವಕವಾಗಿಯೇ ಸಾಕ್ಷ್ಯಗಳನ್ನು ಮುಚ್ಚಿ ಹಾಕಿ ಅಂತವರಿಗೆ ರಕ್ಷಣೆ ನೀಡುವುದೇ ತನಿಖೆಯ ಒಟ್ಟಾರೆ ಆಶಯವಾಗಿರುವುದು ಸತ್ಯಕ್ಕೆ ದೂರವಾದ ಸಂಗತಿಯಲ್ಲ.

ಇನ್ನು ಬಿ ರಿಪೋರ್ಟ್ ಪ್ರಶ್ನಿಸಿ ಮೇಲಿನ ನ್ಯಾಯಾಲಯಗಳ ಮೆಟ್ಟಿಲೇರಬೇಕಾದರೆ ಇಂದಿನ ಸರ್ಕಾರವೇ ಈಗ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ. ಏಕೆಂದರೆ ಯಾರು ಈ ದಂಧೆಯಲ್ಲಿ ನಿಜವಾಗಿಯೂ ಭಾಗಿಯಾಗಿದ್ದಾರೆ, ಅಂತವರಿಗೆ ಶಿಕ್ಷೆಯಾಗಬೇಕಾದರೆ ಸರ್ಕಾರ ಕೂಡಾ ಮುಕ್ತ ತನಿಖೆಗೆ ಅವಕಾಶ ನೀಡುವುದು ಅನಿವಾರ್ಯ. ಇತ್ತ ಸರ್ಕಾರ ಮತ್ತು ಸಮಾಜವನ್ನು ವಂಚಿಸುವ ಮೋಸಗಾರರಿಗೆ ಅಧಿಕಾರದಲ್ಲಿರುವ ವ್ಯಕ್ತಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆಂಬ ತಪ್ಪು ಸಂದೇಶ ನಾಡಿನ ಜನತೆಗೆ ತಲುಪಬಾರದೆ ಎಂದಾದರೆ, ಇಂತಹ ಗುರುತರ ಪ್ರಕರಣಗಳಲ್ಲಿ ಆಗಿರುವ ಪ್ರಮಖ ಲೋಪಗಳನ್ನೂ ಸರ್ಕಾರ ಗಮನಿಸಿ ಅದನ್ನು ಸರಿಪಡಿಸುವ ಉದ್ದೇಶ ಅಗತ್ಯ . ಇಲ್ಲವಾದಲ್ಲಿ ಇಂತಹ ಎಸ್‌ಐಟಿ ತನಿಖೆಗಳ ಪರಮಾಶಯ ಮತ್ತು ಸತ್ಯವನ್ನು ಹೊರಗೆಳೆಯುವ ನಿಖರ ನ್ಯಾಯಿಕ ತನಿಖೆಗಳ ಸಮಾಧಿ ಆಗುವುದಂತೂ ಖಂಡಿತ.

Related Posts

Leave a Reply

Your email address will not be published. Required fields are marked *