ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಮೇ 15 ರಂದು ಒಂದು ವರ್ಷದವರೆಗೆ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಸುಪ್ರೀಂ ಕೋರ್ಟ್ ನೀಡಿದ್ದ ಅದೇಶ ಮರು ಪರಿಶೀಲನೆ ಮಾಡುವಂತೆ ಕೋರಿ ಆರೋಪಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.
ಜೈಲಿನಲ್ಲಿರುವ ದರ್ಶನ್ ಇನ್ನೂ ಒಂದು ವರ್ಷ ಜೈಲಿನಲ್ಲ ಕಳೆಯಬೇಕಿದೆ. ದರ್ಶನ್ ಹಾಗೂ ಇತರ ಆರೋಪಿಗಳಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು 2025ರ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಒಂದು ವರ್ಷದವರೆಗೆ ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಆದೇಶಿತ್ತು. ಈ ಅದೇಶದ ಮರು ಪರಿಶೀಲನೆ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ.
ಪ್ರಕರಣದಲ್ಲಿ 273 ಸಾಕ್ಷಿಗಳಲ್ಲಿ 15 ಸಾಕ್ಷಿಗಳ ವಿಚಾರಣೆ ಮುಗಿದಿದೆ. ಸಾಕ್ಷಿಗಳ ವಿಚಾರಣೆ ವಿಳಂಬ ಆಗುತ್ತಿದೆ. ಇದೇ ರೀತಿಯಾದರೆ ವಿಚಾರಣೆ ಮುಗಿಯಲು ಹಲವು ವರ್ಷ ಬೇಕಾಗುತ್ತದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ದರ್ಶನ್ ಮನವಿ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ದರ್ಶನ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಹೊಸ ಜಾಮೀನು ಅರ್ಜಿ ಸಲ್ಲಿಸಲು ವಿಧಿಸಲಾದ ಒಂದು ವರ್ಷದ ನಿರ್ಬಂಧ ಸಡಿಲಿಸುವಂತೆ ಕೋರಿ ನಟ ದರ್ಶನ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ನಟ ದರ್ಶನ್ 2025ರ ಆಗಸ್ಟ್ನಿಂದಲೂ ಜೈಲಿನಲ್ಲಿದ್ದಾರೆ. ಸಂಬಂಧಪಟ್ಟ ನ್ಯಾಯಾಲಯಗಳು ಹೊರಡಿಸಿದ ಎಲ್ಲ ನಿರ್ದೇಶನಗಳನ್ನು ಪಾಲಿಸಿದ್ದಾರೆ. ವಿಚಾರಣೆಗೆ ಹಾಜರಾಗುವುದರಲ್ಲಿ ವಿಳಂಬ ಮಾಡಿಲ್ಲ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಹಕರಿಸಿದ್ದಾರೆ. ಕಾನೂನಿನ ಪ್ರಕಾರ ವಿಚಾರಣೆ ಎದುರಿಸಲು ಸಿದ್ಧರಿದ್ದಾರೆ ಎಂದು ದರ್ಶನ್ ಪರ ವಕೀಲರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್, ದರ್ಶನ್ ಅವರಿಗೆ ಜಾಮೀನು ನೀಡಲು ನಿರಾಕರಿಸಿ, ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಮುಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ವಿಚಾರಣಾ ನ್ಯಾಯಾಲಯ ದಿನನಿತ್ಯ ಸಾಕ್ಷಿಗಳ ವಿಚಾರಣೆ ನಡೆಸಿ ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಿದ ಬಳಿಕ ದರ್ಶನ್ ಮತ್ತೊಮ್ಮೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು.


