Menu

ಎಸ್‌ಐಆರ್‌ ಹೈಜಾಕ್‌, ದೇಶದ್ರೋಹಿಗಳಿಗೆ ಕಾಂಗ್ರೆಸ್ ಮಣೆ:‌ ಆರ್‌ ಅಶೋಕ

ಶಾಶ್ವತ ನಿವಾಸಿ ಪ್ರಮಾಣಪತ್ರದ ಮೂಲಕ ಎಸ್‌ಐರ್‌ ಪ್ರಕ್ರಿಯೆಯನ್ನೇ ಕಾಂಗ್ರೆಸ್‌ ಹೈಜಾಕ್‌ ಮಾಡುತ್ತಿದೆ. ಇದರಿಂದ ದೇಶದ ಭದ್ರತೆಗೆ ಧಕ್ಕೆಯಾಗಿದ್ದು, ಕೂಡಲೇ ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಗ್ರಹಿಸಿದರು.

ಪತ್ರಕರ್ತರ ಭವನದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್‌ ಪ್ರಕ್ರಿಯೆಯ ಮೂಲಕ ಭಾರತೀಯರಿಗೆ ಮಾತ್ರ ಮತದಾನದ ಹಕ್ಕನ್ನು ನೀಡಲಾಗುತ್ತಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಎಸ್‌ಐಆರ್‌ ಪ್ರಕ್ರಿಯೆಯನ್ನು ಹೈಜಾಕ್‌ ಮಾಡುತ್ತಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ನಂತರ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಲಾಗುತ್ತಿದೆ. ಅಂದರೆ ಇಷ್ಟು ದಿನ ನಾವೆಲ್ಲರೂ ಅತಂತ್ರವಾಗಿ ವಾಸಿಸುತ್ತಿದ್ದೆವಾ ಎಂದು ಪ್ರಶ್ನೆ ಮಾಡಬೇಕಿದೆ. ದೇಶದಲ್ಲಿ ಸುಮಾರು 2 ಕೋಟಿ ಬಾಂಗ್ಲಾ ಪ್ರಜೆಗಳಿದ್ದಾರೆ. ಇಂತಹವರಿಗೆ ಪ್ರಮಾಣಪತ್ರ ನೀಡಿದರೆ ಅವರನ್ನು ವಾಪಸ್‌ ಕಳುಹಿಸಲು ಸಾಧ್ಯವಾಗುವುದಿಲ್ಲ. ಅಲ್ಪಸಂಖ್ಯಾತರನ್ನು ಓಲೈಸಲು ಸರ್ಕಾರ ಈ ಕುತಂತ್ರ ಮಾಡಿದೆ ಎಂದರು.

ಪೌರತ್ವ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ಭಾರತೀಯ ನಾಗರಿಕರು ಅಲ್ಲ ಎಂದು ಗೊತ್ತಾದರೆ ಅವರನ್ನು ಸಂಬಂಧಿಸಿದ ದೇಶಕ್ಕೆ ಕಳುಹಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಮೊದಲು ಕಾಂಗ್ರೆಸ್‌ನ ಪಾರ್ಟ್‌ನರ್‌ ಮಮತಾ ಬ್ಯಾನರ್ಜಿ ಅಧಿಕಾರದಲ್ಲಿದ್ದರು. ಆಗ ಅನೇಕ ಬಾಂಗ್ಲಾ ಜನರು ಬಂದಿದ್ದು, ಆ ಬಗ್ಗೆ ಕಾಂಗ್ರೆಸ್‌ ಪ್ರಶ್ನೆ ಮಾಡಿರಲಿಲ್ಲ. ಅಸ್ಸಾಂ, ಬಿಹಾರದಲ್ಲೂ ಇದೇ ಸಮಸ್ಯೆ ಇದೆ. ನಕ್ಸಲ್‌ ಸಮಸ್ಯೆ ಆರಂಭವಾಗಲು ಕೂಡ ಕಾಂಗ್ರೆಸ್‌ ಕಾರಣ. ಕಾಂಗ್ರೆಸ್‌ ನಾಯಕರು ಇಷ್ಟು ವರ್ಷ ಕತ್ತೆ ಕಾದು, ಈಗ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಸರ್ಕಾರ ದೇಶದ್ರೋಹಿಗಳಿಗೆ ಮಣೆ ಹಾಕಿದರೆ ಕೋಮು ಗಲಭೆ ಹೆಚ್ಚುತ್ತದೆ. ಈಗಾಗಲೇ ಮುಸ್ಲಿಂ ಸಂಘಟನೆಗಳ ವಿರುದ್ಧದ ಕೇಸುಗಳನ್ನು ವಾಪಸ್‌ ಪಡೆಯಲಾಗಿದೆ. ಅವರನ್ನು ಓಲೈಸಲು ಪ್ರಮಾಣಪತ್ರ ನೀಡಬೇಕಿಲ್ಲ ಎಂದು ಕಿಡಿ ಕಾರಿದರು.

ಈ ವೇಳೆಗಾಗಲೇ ಮುಖ್ಯಮಂತ್ರಿ ಡಿಕೆಶಿವಕುಮಾರ್‌ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳನ್ನು ಬರಗಾಲ ಘೋಷಣೆ ಮಾಡಬೇಕಿತ್ತು. ಅದನ್ನು ಬಿಟ್ಟು ಕೇಂದ್ರ ಸರ್ಕಾರ 10,000 ಕೋಟಿ ರೂ. ಕೊಡಬೇಕೆಂದು ಕೆಪಿಸಿಸಿ ಸಭೆಯಲ್ಲಿ ನಿರ್ಣಯ ಮಾಡಿದ್ದಾರೆ. ಸಮೀಕ್ಷೆ ಮಾಡಿಲ್ಲ, ಬರ ಘೋಷಿಸಿಲ್ಲ, ಮೇವು, ನೀರು ಎಷ್ಟಿದೆ ಎಂದು ಹೇಳಿಲ್ಲ, ಆದರೂ ಕೇಂದ್ರದಿಂದ ಹಣ ನೀಡಬೇಕೆಂದು ಹೇಳುತ್ತಿದ್ದಾರೆ. ಜವಾಬ್ದಾರಿಯುತ ಸರ್ಕಾರ ಮೊದಲು ಸಮೀಕ್ಷೆ ಮಾಡಿ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದರೆ ಮಾತ್ರ ಪರಿಹಾರ ನೀಡಲಾಗುತ್ತದೆ. ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳ ತಂಡವನ್ನು ಕಳುಹಿಸಿ ಸಮೀಕ್ಷೆ ಮಾಡಿ ವರದಿ ಪಡೆದು ನಂತರ ಹಣ ಬಿಡುಗಡೆ ಮಾಡುತ್ತದೆ. ಪ್ರತಿ ವರ್ಷ ಎಸ್‌ಡಿಆರ್‌ಎಫ್‌ನಲ್ಲಿ ಪರಿಹಾರ ಬರುತ್ತದೆ. ಆ ಹಣವನ್ನು ಏನು ಮಾಡಲಾಗಿದೆ ಎಂದು ಸರ್ಕಾರ ಲೆಕ್ಕ ನೀಡಬೇಕು. ಅದನ್ನು ಬಿಟ್ಟು ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಿಎಂ ಡಿ.ಕೆ.ಶಿವಕುಮಾರ್‌ಗೆ ತಾವು ಹಿಂದೂ ಎಂಬುದರ ಬಗ್ಗೆ ಅನುಮಾನವಿದ್ದಂತಿದೆ. ಅದಕ್ಕಾಗಿ ಎಲ್ಲ ಕಡೆ ದೇವಾಲಯಗಳಿಗೆ ಹೋಗುತ್ತಿದ್ದಾರೆ. ದೊಡ್ಡದಾಗಿ ವಿಭೂತಿ ಬಳಿದುಕೊಂಡು ಫೋಸ್ ನೀಡುತ್ತಿದ್ದಾರೆ. ಅದನ್ನು ಬಿಟ್ಟು ಮಳೆ ಕೊರತೆ ಇರುವ ಚಾಮರಾಜನಗರ, ಮೈಸೂರು ಮೊದಲಾದ ಭಾಗಗಳ ರೈತರ ಸಂಕಷ್ಟವನ್ನು ಆಲಿಸಬೇಕು. ಕೆಆರ್ ಎಸ್ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ನೀಡದೆ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ. ಮತ್ತೊಂದು ಕಡೆ ಬೆಳೆ ಬೆಳೆಯಬಾರದು ಎಂದು ರೈತರಿಗೆ ಕರೆ ನೀಡಲಾಗಿದೆ. ಬೇಡ ಎಂದರೆ ಪರಿಹಾರ ಕೊಡುವ ಬಗ್ಗೆ ಹೇಳಬೇಕಾಗಿತ್ತು ಎಂದು ವಾಗ್ದಾಳಿ ನಡೆಸಿರು.

ಚಾಮರಾಜನಗರಕ್ಕೆ ಬರಲು ತಡವಾಗಿದ್ದಕ್ಕೆ ಈ ಭಾಗದಲ್ಲಿ ಹೆಚ್ಚು ರಸ್ತೆ ಗುಂಡಿ ಇರುವುದರಿಂದ ಬಹಳ ತಡವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಬಂದು ಇದನ್ನು ಪರಿಶೀಲನೆ ಮಾಡಬೇಕಿತ್ತು, ರೈತರ ಸಮಸ್ಯೆ ಕೇಳ ಬೇಕಿತ್ತು. ಆ ಕೆಲಸ ಮಾಡಿಲ್ಲ. 30 ಲಕ್ಷ ರೇಷನ್‌ ಕಾರ್ಡುಗಳನ್ನು ರದ್ದು ಮಾಡಲಾಗುತ್ತಿದೆ. 20 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಪಿಂಚಣಿ ತಡೆಹಿಡಿಯಲಾಗಿದೆ. ಕುಸ್ತಿ ಪೈಲ್ವಾನರ ಗೌರವಧನವನ್ನು ಏಳು ತಿಂಗಳಿಂದ ನೀಡಿಲ್ಲ. ಗೃಹಲಕ್ಷ್ಮಿಯ 5,000 ಕೋಟಿ ರೂ. ಹಣ ಇನ್ನೂ ಬಾಕಿ ಉಳಿದಿದೆ. 32,000 ಅನಾಥ ಮಕ್ಕಳ 78 ಕೋಟಿ ರೂ. ನೀಡಿಲ್ಲ. ಭಿಕ್ಷುಕರ ಕಾಲೋನಿಗೆ 30 ಕೋಟಿ ರೂ. ನೀಡಿಲ್ಲ ಎಂದು ಹೇಳಿದರು.

ಈಗ ಸಮೀಕ್ಷೆ ಮಾಡಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡಲಾಗುತ್ತಿದೆ. ಯುವನಿಧಿ ಯೋಜನೆ ಕೇವಲ ಹೆಸರಿಗಷ್ಟೇ ಇದೆ. ಗೃಹಲಕ್ಷ್ಮಿ ಐದು ಸಾವಿರ ಕೋಟಿ ಲೂಟಿ ಮಾಡಿದರು. ಇನ್ನೂ ಲೆಕ್ಕ ಕೊಟ್ಟಿಲ್ಲ. ಕೂಡಲೇ ಎಲ್ಲ ಬಾಕಿಗಳನ್ನು ಸರ್ಕಾರ ಪಾವತಿಸಬೇಕು ಎಂದು ಒತ್ತಾಯಿಸಿದರು.

ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್‌ ಜನರಿಗೆ ದ್ರೋಹ ಬಗೆದಿದೆ. ಪ್ರಣಾಳಿಕೆಯಲ್ಲಿ ಹೇಳಿದ್ದೇ ಒಂದು, ಈಗ ಮಾಡುತ್ತಿರುವುದೇ ಮತ್ತೊಂದು. ಎಲ್ಲರಿಗೂ ನೀಡುವುದಾಗಿ ಹೇಳಿ ಮಂಕುಬೂದಿ ಎರಚಿ ಈಗ ಮೋಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಳ್ಳುತ್ತಿದೆ. ಸಿದ್ದರಾಮಯ್ಯ ಮೂರು ವರ್ಷ ಟೆಂಡರ್‌ ಪಡೆದಿದ್ದು, ಇನ್ನೆರಡು ವರ್ಷ ಡಿಕೆಶಿವಕುಮಾರ್‌ ಟೆಂಡರ್‌  ನೀಡಿದ್ದಾರೆ. ಇಷ್ಟು ದಿನಗಳಾದರೂ ಸಚಿವ ಸಂಪುಟ ಪುನರ್‌ ರಚನೆಯಾಗಿಲ್ಲ. ಖಾತೆಗೆ ತಕ್ಕಂತೆ 100-150 ಕೋಟಿ ರೂ. ನಿಗದಿ ಮಾಡಿದ್ದು, ರಾಹುಲ್‌ ಗಾಂಧಿಗೆ ಹಣ ನೀಡಲಾಗುತ್ತಿದೆ. ಆರ್ಥಿಕವಾಗಿ ಪಾಪರ್‌ ಆಗಿರುವ ಸರ್ಕಾರ ಯಾವುದೇ ಯೋಜನೆಗೂ ಹಣ ಬಿಡುಗಡೆ ಮಾಡುತ್ತಿಲ್ಲ. ಮಾಜಿ ಸಿಎಂ3 ಲಕ್ಷ ಕೋಟಿ ಸಾಲ ಮಾಡಿದ್ದರು, ಈಗ ಡಿಕೆ ಇನ್ನೂ 2 ಲಕ್ಷ ಕೋಟಿ ರೂ. ಸಾಲ ಮಾಡಿ ತಮಿಳುನಾಡನ್ನು ಮೀರಿಸಲಿದ್ದಾರೆ ಎಂದರು.

Related Posts

Leave a Reply

Your email address will not be published. Required fields are marked *