ಟ್ರಂಪ್ ಗೊಂದಲಕಾರಿ ಮತ್ತು ಅಸ್ಥಿರ ನೀತಿ ಮತ್ತು ಹೇಳಿಕೆಗಳೇ ಇಂದು ಮತ್ತೆ ಇರಾನ್ ಅನ್ನು ಕೆರಳಿಸಿದೆ. ಮಲಗಿರುವವರೂ ರೋಷದಿಂದ ಎದ್ದು ಕುಳಿತುಕೊಳ್ಳುವ ರೀತಿಯಲ್ಲಿ ಟ್ರಂಪ್ ಹೇಳಿಕೆ ನೀಡುತ್ತಿದ್ದು ಇದು ಶಾಂತಿ ಮಾತುಕತೆ ಮತ್ತು ಶಾಂತಿ ಸ್ಥಾಪನೆಗೆ ನೇರ ಅಡ್ಡಿಯಾಗಿ ತೊಡಕಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಯುದ್ದ ಇಂದು ಯಾರಿಗೂ ಬೇಕಿಲ್ಲ. ಆದರೆ ಟ್ರಂಪ್ ಮಾತ್ರ ಯುದ್ದವನ್ನು ಸಂಭ್ರಮಿಸುತ್ತಿರುವುದು ವಿಷಾಧನೀಯ .
ಮಧ್ಯಪ್ರಾಚ್ಯದಲ್ಲಿ ಮತ್ತೆ ಸಮರ ಮರು ಆರಂಭ. ಇತ್ತ ಇರಾನ್‌ನಲ್ಲಿ ಖಮೇನಿ ಅಂತ್ಯಕ್ರಿಯೆ ನಡೆದಿರುವ ಬೆನ್ನಹಿಂದೆಯೇ ಅಮೆರಿಕ ಮಿಲಿಟರಿ ಪಡೆಗಳಿಂದ ಆರಂಭಗೊಂಡ ಬಿರುಸಿನ ಬಾಂಬ್, ಕ್ಷಿಪಣಿ ಹಾಗೂ ದ್ರೋಣ್ ದಾಳಿ. ಕದನ ವಿರಾಮದ ಬಳಿಕ, ಸಮರಪೀಡಿತ ದೇಶಗಳ ನಡುವೆ ಶಾಂತಿ ಸ್ಥಾಪಿಸಲು ನಡೆದ ಪ್ರಯತ್ನಗಳೆಲ್ಲವೂ ವಿಫಲ. ಒಂದರ್ಥದಲ್ಲಿ ಈ ಪ್ರಯತ್ನಗಳೆಲ್ಲವೂ ಹರ್ಮೂಜ್ ಜಲಸಂಧಿಯಲ್ಲಿ ಈಗ ಹೋಮ ಮಾಡಿದಂತಿದೆ. ಶಾಂತಿ ಒಪ್ಪಂದಕ್ಕೆ ಅಂತಾರಾಷ್ದ್ರೀಯ ಮಟ್ಟದಲ್ಲಿ ಇದುವರೆಗೆ ಸೂಕ್ತ ವೇದಿಕೆಯೇ ಸೃಷ್ಟಿಯಾಗಲಿಲ್ಲ. ಉಗ್ರಗಾಮಿಗಳನ್ನು ಪೋಷಿಸುತ್ತಿರುವ ಪಾಕಿಸ್ಥಾನದ ನೆಲದಲ್ಲಿ ಎರಡು ತಿಂಗಳ ಹಿಂದೆ ಶಾಂತಿ ಮಾತುಕತೆಗೆ ವೇದಿಕೆ ಸಜ್ಜಾದರೂ, ಇದು ಆರಂಭದಲ್ಲಿಯೇ ಅಪಶಕುನ ಎದುರಿಸಿತು.
ಇರಾನ್ ಮತ್ತು ಅಮೆರಿಕ ನಡುವೆ ಶಾಂತಿಯನ್ನು ಸ್ಥಾಪಿಸಿ ಜಾಗತಿಕ ಮಟ್ಟದಲ್ಲಿ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಬೇಕೆಂಬ ಪಾಕ್ ಮನೋಭಿಲಾಷೆ ಕೊನೆಗೆ ಈಡೇರದೆ ಟುಸ್ ಆಯಿತು. ಇದೇನೆ ಇರಲಿ ಮೊನ್ನೆ ನಡೆದ ಯುದ್ಧದಿಂದ ಇಸ್ರೇಲ್ ಮತ್ತು ಕೊಲ್ಲಿ ದೇಶಗಳಿಗೆ ಆಗಿರುವ ಹಾನಿ ಅಪಾರ. ಇರಾನ್ ದೇಶಕ್ಕೂ ತುಂಬಲಾರದ ನಷ್ಟ ಆಗಿದೆ. ಪ್ರಪಂಚದ ಅಗ್ರದೇಶ ಮತ್ತು ತೈಲ ನಿಕ್ಷೇಪಗಳ ಮತ್ತೊಂದು ಪ್ರಮುಖ ದೇಶವಾದ ಇರಾನ್ ದೇಶಗಳ ನಡುವೆ ಜರುಗಿದ ನಾಲ್ಕು ತಿಂಗಳ ಕಾಲದ ಯುದ್ದದಿಂದ ಭಾರತ ಸೇರಿದಂತೆ ಪ್ರಪಂಚದ ಬಹುತೇಕ ದೇಶಗಳು ಹಲವು ಹತ್ತು ರೀತಿಯಲ್ಲಿ ಕಷ್ಟ , ನಷ್ಟ ಅನುಭಿಸಿವೆ . ಈಗಲೂ ಬಹುತೇಕ ದೇಶಗಳು ಇರಾನ್- ಅಮೆರಿಕದ ಗುದ್ದಾಟದಿಂದ ಚೇತರಿಕೊಳ್ಳಲು ಸಾಧ್ಯವಾಗದೆ ಹತಾಶ ಸ್ಥಿತಿಯಲ್ಲಿರುವುದು ನಿಜ. ಎರಡು ದೇಶಗಳ ನಡುವೆ ಉಂಟಾದ ಈ ಬಿಕ್ಕಟ್ಟು ಅನ್ನು ವಿಶ್ವ ಸಂಸ್ಥೆಯಲ್ಲಿ ಗಂಭೀರ ಚರ್ಚೆಯಾಗಿ ಯುದ್ದಕ್ಕೆ ತೆರೆ ಎಳೆಯುವ ಕೆಲಸ ಈ ವೇಳೆಗಾಗಲೇ ಆಗಬೇಕಿತ್ತು.
ದುರಂತ ಎಂದರೆ ಇಂದು ಅಮೆರಿಕ ಆದ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ವೈಖರಿ ಮತ್ತು ಪ್ರಚೋದನಾತ್ಮಕ ಹೇಳಿಕೆಗಳನ್ನು ಬಹಿರಂಗವಾಗಿ ಖಂಡಿಸಿ ಶಾಂತಿ ಸ್ಥಾಪನೆಗೆ ಮುಂದಾಗಲು ಯಾವ ದೇಶವೂ ಮುಂದಾಗುತ್ತಿಲ್ಲ. ಈ ದಿಶೆಯಲ್ಲಿ ಭಾರತಕ್ಕೆ ಈ ಸಮಸ್ಯೆಯನ್ನು ಜಾಗತಿಕ ಮಟ್ಟದಲ್ಲಿ ಬಗೆಹರಿಸುವ ಶಕ್ತಿ ಸಾಮರ್ಥ್ಯ ಇದ್ದರೂ ಭಾರತವನ್ನು ಓಲೈಸುವ ಬೆಳವಣಿಗೆಗಳು ಜಾಗತಿಕವಾಗಿ ನಡೆದಿಲ್ಲ. ಯೂರೋಪ್ ದೇಶಗಳಿಗೆ ಇರಾನ್ – ಅಮೆರಿಕ ನಡುವಣದ ಬಿಕ್ಕಟ್ಟು ನಗಣ್ಯವಾಗಿದೆ. ಇದರಲ್ಲಿ ಬ್ರಿಟನ್ ತುಸು ಆಸಕ್ತಿ ತೋರಿದರೂ ಉಳಿದ ದೇಶಗಳ ಆಸಕ್ತಿ ಕಡಿಮೆ ಇದೆ. ಇನ್ನು ರಷ್ಯಾ ಮತ್ತು ಚೀನಾ ತನಗೇನೂ ಈ ವಿಚಾರದಲ್ಲಿ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಮೌನ ವಹಿಸಿರುವುದು ಕಳವಳಕಾರಿ.
ಕದನ ವಿರಾಮ ಮತ್ತು ಶಾಂತಿ ಮಾತುಕತೆ ವಿಚಾರದಲ್ಲಿ ಟ್ರಂಪ್ ಗೊಂದಲಕಾರಿ ಮತ್ತು ಅಸ್ಥಿರ ನೀತಿ ಮತ್ತು ಹೇಳಿಕೆಗಳೇ ಇಂದು ಮತ್ತೆ ಇರಾನ್ ಅನ್ನು ಕೆರಳಿಸಿದೆ. ಮಲಗಿರುವವರೂ ರೋಷದಿಂದ ಎದ್ದು ಕುಳಿತುಕೊಳ್ಳುವ ರೀತಿಯಲ್ಲಿ ಟ್ರಂಪ್ ಹೇಳಿಕೆ ನೀಡುತ್ತಿದ್ದು ಇದು ಶಾಂತಿ ಮಾತುಕತೆ ಮತ್ತು ಶಾಂತಿ ಸ್ಥಾಪನೆಗೆ ನೇರ ಅಡ್ಡಿ ಮತ್ತು ತೊಡಕಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಯುದ್ದ ಇಂದು ಯಾರಿಗೂ ಬೇಕಿಲ್ಲ. ಆದರೆ ಟ್ರಂಪ್ ಮಾತ್ರ ಯುದ್ದವನ್ನು ಸಂಭ್ರಮಿಸುತ್ತಿರುವುದು ವಿಷಾದಕರ.


