Menu

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿಕೃತವಾಗಿ ಅಂಗೀಕರಿಸಿದ್ದಾರೆ. ಸಿದ್ದರಾಮಯ್ಯ ಅವರು ಗುರುವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದರು. ರಾಜ್ಯಪಾಲ ಗೆಹ್ಲೋಟ್ ವಿಶೇಷ ವಿವೇಚನಾಧಿಕಾರ ಬಳಸಿ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ನೂತನ ಮುಖ್ಯಮಂತ್ರಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಮಾಣವಚನಕ್ಕೆ ಸಿದ್ಧತೆ ಆರಂಭಗೊಂಡಿದೆ. ಸಿದ್ದರಾಮಯ್ಯ ಅವರು ಸಚಿವರೊಂದಿಗಿನ ಸಭೆಯಲ್ಲಿ ಮುಂದಿನ ಸಿಎಂ ಡಿಕೆ ಶಿವಕುಮಾರ್ ಆಗಲಿದ್ದಾರೆ ಎಂದು ಸಹೋದ್ಯೋಗಿಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾಗಿ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಶಿವಕುಮಾರ್ ಪದಗ್ರಹಣಕ್ಕೆ ಹೈಕಮಾಂಡ್‌ನಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ, ಶಿವಕುಮಾರ್‌ ಜೊರೆ 10 ಸಚಿವರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶಿವಕುಮಾರ್ ದೆಹಲಿಗೆ ತೆರಳಿದ್ದು, ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯನ್ನು ಭೇಟಿಯಾಗಿ, ಹೊಸ ಸಚಿವ ಸಂಪುಟದ ಮಾದರಿ ಹಾಗೂ ತಮ್ಮೊಂದಿಗೆ ಪ್ರಮಾಣವಚನ ಸ್ವೀಕರಿಸಲಿರುವ 10 ಪ್ರಮುಖ ಸಚಿವರ ಪಟ್ಟಿಯ ಕುರಿತು ಮಾಹಿತಿ ನೀಡಲಿದ್ದಾರೆ.

ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲು ಜ್ಯೋತಿಷಿ ದ್ವಾರಕನಾಥ್ ಗುರೂಜಿ ಅವರಿಂದ ಮೂರು ವಿಭಿನ್ನ ಶುಭ ಮುಹೂರ್ತಗಳನ್ನು ಪಡೆದಿರುವ ಶಿವಕುಮಾರ್‌, ಹೈಕಮಾಂಡ್ ನಾಯಕರಾದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಲಭ್ಯತೆಯನ್ನು ನೋಡಿಕೊಂಡು ದಿನಾಂಕ ನಿಗದಿಗೊಳಿಸಲಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧಿಕೃತ ಸಭೆ ನಡೆಸಿ, ಶಾಸಕಾಂಗ ನಾಯಕನ ಆಯ್ಕೆಯಾದ ಬಳಿಕ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಶಿವಕುಮಾರ್ ಹಾಗೂ ಸಹೋದರ ಡಿ.ಕೆ. ಸುರೇಶ್ ಮೌನವಾಗಿದ್ದು, ಮಾಧ್ಯಮಗಳಿಗೆ ಅಧಿಕೃತ ಹೇಳಿಕೆ ನೀಡದೆ ಕೈಮುಗಿಯುತ್ತಾ ವಿಕ್ಟರಿ ಸಿಂಬಲ್ ತೋರಿಸುತ್ತಿದ್ದಾರೆ. ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿ, ‘ಪಕ್ಷದ ಮುಂದಿನ ಅಧಿಕೃತ ನಿರ್ಧಾರಕ್ಕೆ ನಾವೆಲ್ಲರೂ ಕಾಯೋಣ’ ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *