Menu

ಲೋಕಭವನದಲ್ಲಿ ಸಸ್ಯಾಹಾರ ಅಡುಗೆ ಮಾತ್ರ: ಕೇರಳ ರಾಜ್ಯಪಾಲರ ಆದೇಶಕ್ಕೆ ಕಟು ವಿರೋಧ!

ಉದಯಕಾಲ ನ್ಯೂಸ್, ತಿರುವನಂತಪುರಂ: ಕೇರಳದ ನೂತನ ರಾಜ್ಯಪಾಲರಾಗಿ ಓಂ ಪ್ರಕಾಶ್ ಮಾಥುರ್ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದೊಡ್ಡ ವಿವಾದವೊಂದಕ್ಕೆ ಸಿಲುಕಿದ್ದಾರೆ. ‘ಲೋಕ್ ಭವನ’ದ ಅಡುಗೆ ಮನೆಯಲ್ಲಿ ಕೇವಲ ಸಸ್ಯಾಹಾರಿ ಅಡುಗೆ ಮಾತ್ರ ಮಾಡಬೇಕೆಂಬ ಆದೇಶ ಹೊರಡಿಸಿದ್ದು,ಈ ನಿರ್ಧಾರ ರಾಜ್ಯದಲ್ಲಿ ತೀವ್ರ ರಾಜಕೀಯ ಚರ್ಚೆಗೆ ಹಾಗೂ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಸಿಪಿಐ(ಎಂ) ಪಕ್ಷಗಳ ಕಟು ಟೀಕೆಗೆ ಕಾರಣವಾಗಿದೆ.

ಕೇರಳದ 29ನೇ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ ಓಂ ಪ್ರಕಾಶ್ ಮಾಥುರ್, ಲೋಕ ಭವನದ ಅಡುಗೆಮನೆಯಲ್ಲಿ ಮಾಂಸಾಹಾರಿ ಆಹಾರವನ್ನು ತಯಾರಿಸಬಾರದು ಮತ್ತು ಬಡಿಸಬಾರದು ಎಂದು ನಿರ್ದೇಶನ ನೀಡಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿದ್ದವು. ಅಪ್ಪಟ ಸಸ್ಯಾಹಾರಿಯಾಗಿರುವ ಅವರು, ತಮ್ಮ ಅಧಿಕಾರಾವಧಿಯ ಮೊದಲ ದಿನವೇ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಮತ್ತು ಸಿಪಿಐ(ಎಂ) ತೀವ್ರ ಆಕ್ರೋಶ

ಅಡುಗೆಮನೆಯಲ್ಲಿ ಸಸ್ಯಾಹಾರಿ ಆಹಾರವನ್ನು ಮಾತ್ರ ತಯಾರಿಸಬೇಕೆಂದು ನಿರ್ದೇಶಿಸುವ ಮೂಲಕ ರಾಜ್ಯಪಾಲರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.

ಆಹಾರ ಸ್ವಾತಂತ್ರ್ಯವೆಲ್ಲಿ?

ಕೇರಳವು ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಹೊಂದಿದ್ದು, ಕರಾವಳಿ ಪ್ರದೇಶದಲ್ಲಿ ಮೀನು ಸಂಪನ್ಮೂಲಗಳು ಹೇರಳವಾಗಿವೆ. ಇಲ್ಲಿನ ಜನರು ತಮ್ಮಿಷ್ಟದ ಸಸ್ಯಾಹಾರ ಅಥವಾ ಮಾಂಸಾಹಾರ ಪದ್ಧತಿಯನ್ನು ಅನುಸರಿಸಲು ಸ್ವತಂತ್ರರಾಗಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ. ಈ ನಿರ್ಧಾರವು ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಸೂಚಿಯನ್ನು ಮುಂದಕ್ಕೆ ಒಯ್ಯುವ ಕ್ರಮವಾಗಿದೆ ಎಂದು ಎಡಪಕ್ಷಗಳು ಮತ್ತು ಕಾಂಗ್ರೆಸ್ ನಾಯಕರು ತೀವ್ರವಾಗಿ ದೂರಿದ್ದಾರೆ.

ರಾಜಭವನದ ಸ್ಪಷ್ಟನೆ

ಈ ವರದಿಗಳಿಗೆ ಪ್ರತಿಕ್ರಿಯಿಸಿರುವ ರಾಜಭವನದ ಮೂಲಗಳು, ರಾಜ್ಯಪಾಲರು ಅಪ್ಪಟ ಸಸ್ಯಾಹಾರಿ ಆಗಿರುವ ಕಾರಣ ತಮ್ಮ ವೈಯಕ್ತಿಕ ಅಡುಗೆಯಷ್ಟೇ ಈ ಬದಲಾವಣೆ ಸೀಮಿತವಾಗಿದೆ ಎಂದು ತಿಳಿಸಿವೆ. ಅಲ್ಲದೆ, ಲೋಕ ಭವನದ ಇತರ ಉದ್ಯೋಗಿಗಳ ಆಹಾರ ಆಯ್ಕೆಗಳ ಮೇಲೆ ಅಥವಾ ಅವರ ಸ್ವಾತಂತ್ರ್ಯದ ಮೇಲೆ ಯಾವುದೇ ರೀತಿಯ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿವೆ.
#KeralaGovernor #OmPrakashMathur #LokBhavan #VegOnlyKitchen #Congress #CPIM #KeralaNews #UdayakalaNews #PoliticalControversy #FoodFreedom

Related Posts

Leave a Reply

Your email address will not be published. Required fields are marked *