ಉದಯಕಾಲ ನ್ಯೂಸ್, ಮೈಸೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್‌ಮೇಲ್ ಮಾಡುವ ಗಂಭೀರ ಯತ್ನ ನಡೆದಿದ್ದು, ಈ ಸ್ಟಿಂಗ್ ಆಪರೇಷನ್ ಪ್ರಕರಣದ ಹಿಂದೆ ಸ್ವಪಕ್ಷದವರೇ, ಅದರಲ್ಲೂ ಕಾಂಗ್ರೆಸ್‌ನ ಓರ್ವ ಮಹಿಳೆ ಶಾಮೀಲಾಗಿದ್ದಾರೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಮಾಹಿತಿ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸಿಗೆ ಮಸಿ ಬಳಿಯಲು ಈ ಷಡ್ಯಂತ್ರ ರೂಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪ್ಪನ ಹೆಸರಿಗೆ ಮಸಿ ಬಳಿಯಲು ಬ್ಲ್ಯಾಕ್‌ಮೇಲ್ ತಂತ್ರ
ಮಾತನಾಡುತ್ತಾ ಯತೀಂದ್ರ ಸಿದ್ದರಾಮಯ್ಯ, ಅಪ್ಪನ ಮೇಲೆ ಬ್ಲ್ಯಾಕ್‌ಮೇಲ್ ಮಾಡುವ ಯತ್ನ ನಡೆದಿದೆ. ಅವರ ಹೆಸರು ಕೆಡಿಸಲು ಈ ಸ್ಟಿಂಗ್ ವಿಚಾರವನ್ನು ಮುನ್ನಲೆಗೆ ತಂದಿದ್ದಾರೆ. ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡಿ ಅವರ ಹೆಸರಿಗೆ ಮಸಿ ಬಳಿಯಲು ರಾಜಕೀಯ ಲೆಗಸಿ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. 40 ವರ್ಷಗಳ ಕಾಲ ಯಾವುದೇ ಕಳಂಕವಿಲ್ಲದೆ ರಾಜಕಾರಣ ಮಾಡಿರುವ ತಮ್ಮ ತಂದೆಗೆ ಈ ಬೆಳವಣಿಗೆಯಿಂದ ತೀವ್ರ ಬೇಸರವಾಗಿದೆ ಎಂದರು.
ಸ್ಟಿಂಗ್ ನಲ್ಲಿ ಕಾಂಗ್ರೆಸ್ ಮಹಿಳೆ!
ಈ ಸ್ಟಿಂಗ್ ಪ್ರಕರಣದ ಹಿಂದೆ ಸ್ವಪಕ್ಷೀಯರೇ ಕೈಜೋಡಿಸಿರುವ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ ಯತೀಂದ್ರ, ಈ ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ. ಕಾಂಗ್ರೆಸ್‌ನ ಓರ್ವ ಮಹಿಳೆ ಈ ಪ್ರಕರಣದಲ್ಲಿದ್ದಾರೆ ಎಂದು ಬಹಿರಂಗವಾಗಿ ತಿಳಿಸಿದರು. ಟಿಕೆಟ್‌ಗಾಗಿ ಅಥವಾ ಇನ್ಯಾವುದೋ ದುರುದ್ದೇಶಕ್ಕಾಗಿ ಈ ರೀತಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಲಾಗಿದೆ ಎಂದು ಅವರು ದೂರಿದ್ದಾರೆ.
ಇಬ್ಬರ ವಶ, ತನಿಖೆಯ ಮೇಲಿನ ವಿಶ್ವಾಸ
ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಪತ್ರಕರ್ತ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಕುರಿತು ತಂದೆಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರನ್ನು ಅರೆಸ್ಟ್ ಮಾಡುವಂತೆ ತಂದೆ ಸ್ಪಷ್ಟವಾಗಿ ಸೂಚಿಸಿದ್ದಾರೆ. ನಮ್ಮ ಸರ್ಕಾರದ ತನಿಖೆ ಮೇಲೆ ನಂಬಿಕೆ ಇದೆ, ತನಿಖೆ ಸರಿಯಾಗಿ ನಡೆಯುತ್ತಿದೆ. ಆಕಸ್ಮಾತ್ ತನಿಖೆ ಸರಿಯಾಗಿ ನಡೆಯಲಿಲ್ಲ ಅಂದ್ರೆ, ನಾವು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೊನೆಯಲ್ಲಿ ಮಾತನಾಡಿದ ಅವರು, ಸತ್ಯ ನಮ್ಮ ಕಡೆ ಇದೆ, ಸತ್ಯ ಏನೆಂಬುದು ಶೀಘ್ರದಲ್ಲೇ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
#YathindraSiddaramaiah #Siddaramaiah #StingOperation #KarnatakaPolitics #Congress #MysuruNews #UdayakalaNews #PoliticalControversy #KarnatakaCM


