ಉದಯಕಾಲ ನ್ಯೂಸ್, ಬೆಂಗಳೂರು: ಕರ್ನಾಟಕದ ಸಮಸ್ತ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ಹಾಗೂ ಸಮಾಧಾನಕರ ಸುದ್ದಿ ನೀಡಿದೆ. ರಾಜ್ಯದಲ್ಲಿ ಬಹಳ ದಿನಗಳಿಂದ ಚರ್ಚೆಯಲ್ಲಿದ್ದ ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ರೇಷನ್ ಕಾರ್ಡ್ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿಗದಿಪಡಿಸಿದ್ದ ಗಡುವನ್ನು ಮತ್ತೊಮ್ಮೆ ವಿಸ್ತರಿಸಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆದೇಶ ಹೊರಡಿಸಿದೆ. ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
39 ಲಕ್ಷಕ್ಕೂ ಅಧಿಕ ಮಂದಿಗೆ ನೆರವು
ಮೂಲತಃ ನವೆಂಬರ್ 10ರ ವರೆಗೆ ಮಾತ್ರ ಇ-ಕೆವೈಸಿ ಮಾಡಿಸಲು ಅವಕಾಶ ನೀಡಲಾಗಿತ್ತು. ಆದರೆ ರಾಜ್ಯದ ಒಟ್ಟು 2.67 ಕೋಟಿ ಫಲಾನುಭವಿಗಳ ಪೈಕಿ ಇದುವರೆಗೆ ಸುಮಾರು 2.27 ಕೋಟಿ ಜನರು ಮಾತ್ರ ಇ-ಕೆವೈಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇನ್ನುಳಿದ ಸುಮಾರು 39 ಲಕ್ಷಕ್ಕೂ ಅಧಿಕ ಫಲಾನುಭವಿಗಳು ವಿವಿಧ ಕಾರಣಗಳಿಂದ ಇ-ಕೆವೈಸಿ ಮಾಡಿಸಲು ಸಾಧ್ಯವಾಗಿರಲಿಲ್ಲ.
ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ, ವೃದ್ಧರಿಗೆ ಹಾಗೂ ದೈನಂದಿನ ಕೂಲಿ ಕಾರ್ಮಿಕರಿಗೆ ನಿಗದಿತ ಅವಧಿಯೊಳಗೆ ಬಯೋಮೆಟ್ರಿಕ್ ಅಥವಾ ಇ-ಕೆವೈಸಿ ಪ್ರಕ್ರಿಯೆ ಮುಗಿಸಲು ತಾಂತ್ರಿಕ ಹಾಗೂ ಅಡಚಣೆಗಳು ಎದುರಾಗಿದ್ದವು. ಇದನ್ನು ಮನಗಂಡ ಆಹಾರ ಇಲಾಖೆಯು, ಇನ್ನುಳಿದ ಎಲ್ಲ ಅರ್ಹ ಫಲಾನುಭವಿಗಳಿಗೂ ಅನುಕೂಲವಾಗಲೆಂದು ನವೆಂಬರ್ 30ರ ವರೆಗೆ ಕಾಲಾವಕಾಶವನ್ನು ವಿಸ್ತರಿಸಿ ಉದಾರತೆಯ ಮೆರೆದಿದೆ.
ನ.30ರ ಬಳಿಕ ವಿಸ್ತರಣೆ ಇಲ್ಲ: ಇಲಾಖೆ ಸ್ಪಷ್ಟನೆ
ಸರ್ಕಾರವು ಇ-ಕೆವೈಸಿ ಅವಧಿಯನ್ನು ವಿಸ್ತರಿಸಿರುವುದು ಸಮಾಧಾನಕರ ಸಂಗತಿಯಾಗಿದ್ದರೂ, ಆಹಾರ ಇಲಾಖೆಯು ಕಟ್ಟುನಿಟ್ಟಿನ ಎಚ್ಚರಿಕೆಯೊಂದನ್ನು ನೀಡಿದೆ. ನವೆಂಬರ್ 30ರ ಗಡುವು ಅಂತಿಮವಾಗಿದ್ದು, ಆ ದಿನಾಂಕದ ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ಮುಂದೂಡುವುದಿಲ್ಲ ಅಥವಾ ವಿಸ್ತರಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರು (ಮಕ್ಕಳನ್ನು ಹೊರತುಪಡಿಸಿ) ಕಡ್ಡಾಯವಾಗಿ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ತಮ್ಮ ಇ-ಕೆವೈಸಿ ಮಾಡಿಸಿಕೊಳ್ಳಬೇಕಿದೆ. ಒಂದು ವೇಳೆ ನಿಗದಿತ ದಿನಾಂಕದೊಳಗೆ ಇ-ಕೆವೈಸಿ ಮಾಡಿಸದಿದ್ದರೆ, ಅಂತಹವರ ಹೆಸರುಗಳು ಪಡಿತರ ಪಟ್ಟಿಯಿಂದ ರದ್ದಾಗುವ ಸಾಧ್ಯತೆಯಿದ್ದು, ಸರ್ಕಾರದ ಉಚಿತ ಆಹಾರ ಧಾನ್ಯ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಆದ್ದರಿಂದ ಬಾಕಿ ಇರುವ ಎಲ್ಲಾ ಫಲಾನುಭವಿಗಳು ಕೂಡಲೇ ಎಚ್ಚೆತ್ತುಕೊಂಡು ಕೊನೆಯ ದಿನNದವರೆಗೆ ಕಾಯದೆ ಶೀಘ್ರದಲ್ಲೇ ಪ್ರಕ್ರಿಯೆ ಮುಗಿಸುವಂತೆ ಇಲಾಖೆ ಮನವಿ ಮಾಡಿದೆ.
#RationCard #EKYC #KarnatakaNews #FoodDepartment #Udayakala #GoodNews #PavitraCardUpdate #GovtOfKarnataka


