ಉದಯಕಾಲ ನ್ಯೂಸ್, ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾಗದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ನೆಲೆಸಿರುವ ನಿವಾಸಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1976ರ ಕಲಂ 38(ಡಿ) ಅನ್ನು ಸೇರ್ಪಡೆಗೊಳಿಸಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಪ್ರಾಧಿಕಾರದ ಜಮೀನಿನಲ್ಲಿ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವವರಿಗೆ ಮರುಮಂಜೂರಾತಿ ವ್ಯಾಪ್ತಿಯಲ್ಲಿ ಸಕ್ರಮಗೊಳಿಸಲು ದಾರಿ ಮಾಡಿಕೊಡಲಾಗಿದೆ.
ಈ ಮೂಲಕ ಅನಧಿಕೃತವಾಗಿ ನೆಲೆಸಿರುವವರಿಗೆ ಸಿಎಂ ಡಿಕೆ ಶಿವಕುಮಾರ್ ದೀಪಾವಳಿ ಹಬ್ಬದ ಸಂಭ್ರಮದಲ್ಲೇ ಉಡುಗೊರೆ ನೀಡಿದ್ದಾರೆ. ಬಿಡಿಎ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವ ಅಕ್ರಮವಾಸಿಗಳಿಗೆ ತಮ್ಮ ಆಸ್ತಿಯನ್ನು ಸಕ್ರಮಗೊಳಿಸಿಕೊಳ್ಳಲು ಸರ್ಕಾರ ಮತ್ತೊಂದು ಸುವರ್ಣಾವಕಾಶ ಕಲ್ಪಿಸಿದ್ದು, ಡಿಮ್ಯಾಂಡ್ ಹೆಚ್ಚಿದ್ದ ಹಣಕಾಸಿನ ಮೊತ್ತವನ್ನು ಭರ್ಜರಿ ಶೇ.50ರಷ್ಟು ಕಡಿತಗೊಳಿಸಿದೆ.
ಈ ಹಿಂದೆ 2020ರಲ್ಲಿ 38ಬಿ ಕಾಯ್ದೆಯಡಿ 2008ಕ್ಕೂ ಮೊದಲು ಬಿಡಿಎ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದ ಸುಮಾರು 1 ಲಕ್ಷ ಜನರಿಗೆ ಈ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಅಂದು ನಿಗದಿಪಡಿಸಲಾಗಿದ್ದ ಗೈಡ್‌ಲೈನ್ಸ್ ಮೌಲ್ಯದ ಹಣ ತುಂಬಾ ಹೆಚ್ಚಾಗಿದ್ದ ಕಾರಣ ಕೇವಲ 600 ಮಂದ ಮಾತ್ರ ಅರ್ಜಿ ಸಲ್ಲಿಸಿದ್ದರು. ಜನರ ಈ ಆರ್ಥಿಕ ಹೊರೆಯನ್ನು ಮನಗಂಡು, ಬಿಜೆಪಿ ಸರ್ಕಾರದ ಹಿಂದಿನ ತೀರ್ಮಾನದ ಮಾರ್ಗಸೂಚಿ ಮೌಲ್ಯವನ್ನು ಪ್ರಸ್ತುತ ಶೇ.50ರಷ್ಟು ಕಡಿಮೆ ಮಾಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಡಿಸೆಂಬರ್ 17ರೊಳಗೆ ಅರ್ಜಿ ಸಲ್ಲಿಸಿ; ಶುಲ್ಕರಹಿತ ನೋಂದಣಿಗೆ ಅವಕಾಶ
ಬಿಡಿಎ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ಅಕ್ರಮ ಮನೆಗಳನ್ನು ಸಕ್ರಮಗೊಳಿಸಿಕೊಳ್ಳಲು ನಾಗರಿಕರಿಗೆ ಮತ್ತೊಮ್ಮೆ ಗಡುವು ನೀಡಲಾಗಿದೆ ಎಂದರು.
ಅರ್ಜಿ ಸಲ್ಲಿಕೆಗೆ ಅಂತಿಮ ದಿನ: ಮುಂಬರುವ ಡಿಸೆಂಬರ್ 17, 2026 ರೊಳಗೆ ಯಾರು ಅರ್ಜಿ ಸಲ್ಲಿಸುತ್ತಾರೋ ಅವರಿಗೆ ಮಾತ್ರ ಈ ಸೌಲಭ್ಯ ಅನ್ವಯಿಸಲಿದೆ.
ಈ ಹೊಸ ಅರ್ಜಿಗಳನ್ನು ಸಲ್ಲಿಸಲು ಯಾವುದೇ ಪ್ರತ್ಯೇಕ ಶುಲ್ಕವನ್ನು ವಿಧಿಸಲಾಗುವುದಿಲ್ಲ.
ಸರ್ಕಾರಿ ಭೂಮಿಯಲ್ಲಿ ಭಯದಿಂದ ಬದುಕುತಿರುವ ಬಡಾವಣೆವಾಸಿಗಳು ಈಗಲೇ ಅರ್ಜಿ ಹಾಕಿ, ನಿಗದಿತ ಹಣ ಪಾವತಿಸಿ ತಮ್ಮ ಆಸ್ತಿಗೆ ಅಧಿಕೃತ ಗ್ಯಾರಂಟಿ ಪಡೆದುಕೊಳ್ಳಬಹುದು.
ಹಿಂದೆ ಕೆಲವು ಲೇಔಟ್‌ಗಳಿಗಾಗಿ ತಮ್ಮ ಸ್ವಂತ ಜಮೀನು ನೀಡಿದವರಿಗೆ ಮತ್ತು ಸರ್ಕಾರದ ನಿವೇಶನಗಳ ಪಕ್ಕದಲ್ಲಿ 600 ಅಡಿವರೆಗಿನ ಅಂಚಿನ ಜಾಗವನ್ನು ಹೆಚ್ಚುವರಿಯಾಗಿ ಬಳಸಿಕೊಂಡಿರುವವರಿಗೂ ಗೈಡ್‌ಲೈನ್ಸ್ ಮೌಲ್ಯದಡಿ ಜಮೀನು ಪಡೆದುಕೊಳ್ಳಲು ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿಗರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಸೂರುಗಳನ್ನು ಅಧಿಕೃತಗೊಳಿಸಿಕೊಳ್ಳುವಂತೆ ಸಿಎಂ ಡಿಕೆಶಿ ಮನವಿ ಮಾಡಿದ್ದಾರೆ.
#Bangalore #BDASites #CMDKShivakumar #KarnatakaGovt #BengaluruNews #Udayakala #UrbanDevelopment #PropertyRegularization


