ಕೈರೋ (ಈಜಿಪ್ಟ್): ಆಫ್ರಿಕಾ ಖಂಡದ ಪ್ರಮುಖ ರಾಷ್ಟ್ರವಾದ ಈಜಿಪ್ಟ್ನ ರಾಜಧಾನಿ ಕೈರೋದ ಸಮೀಪ ಭೀಕರ ರೈಲು ಅಪಘಾತವೊಂದು ಸಂಭವಿಸಿದೆ. ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದ ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ರೈಲು ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಈ ದಾರುಣ ಘಟನೆಯಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ವ್ಯಕ್ತಪಡಿಸಲಾಗಿದೆ.
ಗಿಜಾ ಪ್ರಾಂತ್ಯದಲ್ಲಿ ನಡೆದ ಅಪಘಾತ
ಚೀಫ್ ಪ್ರಾಸಿಕ್ಯೂಟರ್ ಕಚೇರಿ ಹಾಗೂ ಸಾರಿಗೆ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಈಜಿಪ್ಟ್ ರಾಜಧಾನಿ ಕೈರೋದಿಂದ ಸುಮಾರು 52 ಕಿಲೋಮೀಟರ್ ದಕ್ಷಿಣದಲ್ಲಿರುವ ಗಿಜಾ ಪ್ರಾಂತ್ಯದ ಅಲ್-ಅಯ್ಯತ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ನೈಋತ್ಯ ಫಯೌಮ್ ಪ್ರಾಂತ್ಯಕ್ಕೆ ತೆರಳುತ್ತಿದ್ದ ರೈಲೊಂದು, ದಕ್ಷಿಣದ ಅಸ್ವಾನ್ ಪ್ರಾಂತ್ಯಕ್ಕೆ ಹೋಗುತ್ತಿದ್ದ ಮತ್ತೊಂದು ರೈಲಿನ ಹಿಂಭಾಗಕ್ಕೆ ಅನಿರೀಕ್ಷಿತವಾಗಿ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಕೈರೋ-ಅಸ್ವಾನ್ ರೈಲು ನಿಂತಿದ್ದ ವೇಳೆ, ಹಿಂದಿನಿಂದ ವೇಗವಾಗಿ ಬಂದ ಗಿಜಾ-ಫಯೌಮ್ ರೈಲು ಅದರ ಕೊನೆಯ ಬೋಗಿಗೆ ಗುದ್ದಿದೆ. ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿ ಐಮನ್ ಗಮಾಲ್ ಮಾತನಾಡಿ, ಹತ್ತಿರದಲ್ಲಿದ್ದ ಸ್ಥಳೀಯರು ತಕ್ಷಣವೇ ಧಾವಿಸಿ, ಬೋಗಿಗಳಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು ಆಂಬ್ಯುಲೆನ್ಸ್ಗಳಿಗೆ ಮಾಹಿತಿ ನೀಡಿದರು. ಸುಮಾರು 80ಕ್ಕೂ ಹೆಚ್ಚು ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಧ್ಯಕ್ಷ ಅಬ್ದೆಲ್-ಫತ್ತಾಹ್ ಎಲ್-ಸಿಸಿ ತನಿಖೆಗೆ ಆದೇಶ
ಈಜಿಪ್ಟ್ನಲ್ಲಿ ರೈಲು ಹಳಿ ತಪ್ಪುವುದು ಮತ್ತು ಇಂತಹ ಅಪಘಾತಗಳು ಮರುಕಳಿಸುತ್ತಿರುವುದು ಅಲ್ಲಿನ ಕಳಪೆ ನಿರ್ವಹಣೆ ಹಾಗೂ ಉಪಕರಣಗಳ ಸರಿಯಾದ ಪಾಲನೆ ಇಲ್ಲದಿರುವುದನ್ನು ಎತ್ತಿ ತೋರಿಸುತ್ತದೆ. ರೈಲ್ವೆ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಹಲವು ಆಧುನೀಕರಣ ಕ್ರಮಗಳನ್ನು ಕೈಗೊಂಡಿದ್ದರೂ ಇಂತಹ ದುರಂತಗಳು ತಪ್ಪುತ್ತಿಲ್ಲ.
ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಈಜಿಪ್ಟ್ ಅಧ್ಯಕ್ಷ ಅಬ್ದೆಲ್-ಫತ್ತಾಹ್ ಎಲ್-ಸಿಸಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ, ಅಪಘಾತದ ಕುರಿತು ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ರೈಲ್ವೆ ಪ್ರಾಧಿಕಾರವು ತಕ್ಷಣವೇ ಕ್ರೇನ್ಗಳು ಹಾಗೂ ತುರ್ತು ತಂಡಗಳನ್ನು ಕಳುಹಿಸಿ ಹಳಿಯಲ್ಲಿದ್ದ ಅವಶೇಷಗಳನ್ನು ತೆರವುಗೊಳಿಸುವ ಮತ್ತು ಸಂಚಾರವನ್ನು ಸುಸ್ಥಿತಿಗೆ ತರುವ ಕಾರ್ಯದಲ್ಲಿ ನಿರತವಾಗಿದೆ. ಕಳೆದ ಸೆಪ್ಟೆಂಬರ್ನಲ್ಲೂ ಇದೇ ಜಿಲ್ಲೆಯಲ್ಲಿ ಎರಡು ಸರಕು ರೈಲುಗಳು ಡಿಕ್ಕಿ ಹೊಡೆದಿದ್ದವು ಎಂಬುದು ಗಮನಾರ್ಹ. 2002ರಲ್ಲಿ ನಡೆದ ಅತ್ಯಂತ ಭೀಕರ ರೈಲು ದುರಂತದಲ್ಲಿ 300ಕ್ಕೂ ಅಧಿಕ ಮಂದಿ ಸಜೀವ ದಹನವಾಗಿದ್ದರು.
#EgyptTrainAccident #CairoTragedy #RailwayCrash #GizaProvince #WorldNews #UdayakalaNews

