Menu

ಪೂಜೆ, ಮಾಟದ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ: ಆರೋಪಿಗಳ ಅರ್ಜಿ ವಜಾಗೊಳಿಸಿದ ಹೈಕೋರ್ಟ್!

ಉದಯಕಾಲ ನ್ಯೂಸ್, ಬೆಂಗಳೂರು: ಆಧುನಿಕ ಯುಗದಲ್ಲೂ ದೇವರು ಮೈಮೇಲೆ ಬರುತ್ತಾರೆ, ವಿಶೇಷ ಪೂಜೆ ಮತ್ತು ಮಾಟಮಂತ್ರ ಮಾಡಿಸುವುದರಿಂದ ಕುಟುಂಬದ ಸಕಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಂಬಿ ಜನರು ವಂಚನೆಗೆ ಒಳಗಾಗುತ್ತಿರುವ ಮೂಢ ಜನರ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಕುಟುಂಬದ ಕಷ್ಟಗಳನ್ನು ಪರಿಹರಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ ಹಾಗೂ ಐದು ಸ್ಥಿರ ಆಸ್ತಿಗಳನ್ನು ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿಯ ಪತ್ನಿ ಹಾಗೂ ಇಬ್ಬರು ರಿಯಲ್ ಎಸ್ಟೇಟ್ ಏಜೆಂಟರ ವಿರುದ್ಧದ ಮೊಕದ್ದಮೆಯನ್ನು ರದ್ದುಪಡಿಸಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.

ದೇವರ ಹೆಸರಿನಲ್ಲಿ ಬ್ಲ್ಯಾಕ್‌ಮ್ಯಾಜಿಕ್: ಸರ್ವವನ್ನೂ ದೋಚಿದ ಖದೀಮರು

ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ಬೆಂಗಳೂರು ನಿವಾಸಿ ಗೀತಾ ಎಚ್.ರವರ ಪತಿ 2009ರಲ್ಲಿ ನಿಧನರಾಗಿದ್ದರು. ಆ ಬಳಿಕ ಕುಟುಂಬದಲ್ಲಿ ಎದುರಾದ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ನಂಬಿಸಿ ಮೊದಲ ಆರೋಪಿ ನಾಗರಾಜ್ ಎಂಬಾತ ಮಹಿಳೆಗೆ ಪರಿಚಯವಾಗಿದ್ದನು. ಪೂಜೆ ಮಾಡುವ ವೇಳೆ ತನ್ನ ಮೈಮೇಲೆ ದೇವರು ಬರುತ್ತಾನೆ ಎಂದು ಅಮಾಯಕ ಮಹಿಳೆಯನ್ನು ನಂಬಿಸಿದ ಆತ, ಸಂಕಷ್ಟ ನಿವಾರಣೆಯ ನೆಪದಲ್ಲಿ ಮಹಿಳೆಯ ಒಟ್ಟು ಐದು ಸ್ಥಿರ ಆಸ್ತಿಗಳನ್ನು ಬಲವಂತವಾಗಿ ಮಾರಾಟ ಮಾಡಿಸಿದ್ದನು. ಇದರೊಂದಿಗೆ 450 ಗ್ರಾಂ ಚಿನ್ನಾಭರಣ ಹಾಗೂ ಭಾರಿ ಪ್ರಮಾಣದ ನಗದನ್ನು ದೋಚಿ ಒಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಲಪಟಾಯಿಸಿದ್ದನು.

ಈ ಕುರಿತು ಸಂತ್ರತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಐಪಿಸಿ (IPC) ಸೆಕ್ಷನ್ 420, 406, 120ಬಿ ಹಾಗೂ ‘ಕರ್ನಾಟಕ ಮಾಟಮಂತ್ರ ಮತ್ತು ಅನಿಷ್ಟ ಪದ್ಧತಿಗಳ ತಡೆ ಕಾಯ್ದೆ – 2017’ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಅರ್ಜಿದಾರರ ರದ್ಧತಿ ಮನವಿ ತಳ್ಳಿಹಾಕಿದ ನ್ಯಾಯಪೀಠ

ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪ್ರಮುಖ ಆರೋಪಿಯ ಪತ್ನಿ ಲಕ್ಷ್ಮಮ್ಮ ಹಾಗೂ ರಿಯಲ್ ಎಸ್ಟೇಟ್ ಏಜೆಂಟರಾದ ಪೆರುಮಾಳ್ ಮತ್ತು ಹೊಸೂರು ಮಂಜು ಎಂಬುವರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಅರ್ಜಿಯನ್ನು ವಜಾಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿರುವ ಆಸ್ತಿಗಳನ್ನು ಮಾರಾಟ ಮಾಡಲು ಕೋಲಾರ ಹಾಗೂ ತಮಿಳುನಾಡಿನ ಧರ್ಮಪುರಿಯ ಏಜೆಂಟರನ್ನು ಮಹಿಳೆ ವೆಬ್‌ಸೈಟ್ ಮೂಲಕ ಸಂಪರ್ಕಿಸಿದ್ದರು ಎಂಬ ಅರ್ಜಿದಾರರ ವಾದ ನಂಬಲರ್ಹವಾಗಿಲ್ಲ. ಎಫ್‌ಐಆರ್‌ನಲ್ಲಿ ಆರಂಭದಲ್ಲಿ ಹೆಸರಿಲ್ಲದ ಮಾತ್ರಕ್ಕೆ ಅವರು ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಹೇಳಲಾಗದು. ಪ್ರಮುಖ ಆರೋಪಿಯ ಪತ್ನಿ ಹಾಗೂ ಏಜೆಂಟರ ನಡುವೆ ಮೊದಲೇ ನಂಟು ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ತನಿಖೆ ವೇಳೆ ಲಭ್ಯವಾದ ಸಾಕ್ಷ್ಯಗಳ ಪ್ರಕಾರ ಇವರೆಲ್ಲರೂ ಸಂಚು ನಡೆಸಿ ಆಸ್ತಿ ಮಾರಾಟದ ಹಣದ ಲಾಭ ಪಡೆದಿರುವುದು ದೃಢಪಟ್ಟಿದೆ ಎಂದು ಪೀಠ ತಿಳಿಸಿದೆ.

ಕೋರ್ಟ್ ತನ್ನ ಆದೇಶದಲ್ಲಿ, ಪ್ರಕರಣವು ಪ್ರಸ್ತುತ ವಿಚಾರಣಾ ಹಂತದಲ್ಲಿದ್ದು, ಈ ಹಂತದಲ್ಲಿ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರು ಕಾನೂನು ಪ್ರಕಾರ ಪೂರ್ಣ ಪ್ರಮಾಣದ ನ್ಯಾಯಾಲಯದ ವಿಚಾರಣೆಯನ್ನು ಎದುರಿಸಲೇಬೇಕು ಎಂದು ಹೈಕೋರ್ಟ್ ಎಚ್ಚರಿಸಿದೆ. ಮೂಢನಂಬಿಕೆ ಹಾಗೂ ಮಾಟಮಂತ್ರದ ಪಿಡುಗಿಗೆ ಬಲಿಪಡೆಯುವ ಇಂತಹ ಜಾಲಗಳ ವಿರುದ್ಧ ಕಠಿಣ ಕಾನೂನು ಕ್ರಮ ಮುಂದುವರಿಯಲಿದೆ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ.

#HighCourtOfKarnataka #BlackMagicFraud #RealEstateAgents #BangaloreCrime #SuperstitionAct #UdayakalaNews

Related Posts

Leave a Reply

Your email address will not be published. Required fields are marked *