Thursday, September 24, 2026
Menu

ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್ ಪ್ಲಾನ್: ಸಿಎಂ

ಕರಾವಳಿ ಭಾಗದಲ್ಲಿ ಸಮುದ್ರ ಸೇರುವ ನೀರನ್ನು ಸಾಧ್ಯವಾದಷ್ಟು ಸಂಗ್ರಹಿಸಿ, ಸ್ಥಳೀಯ ಬಳಕೆಗೆ ಸದ್ಬಳಕೆ ಮಾಡಿಕೊಳ್ಳಲು ವೈಜ್ಞಾನಿಕ ಮಾಸ್ಟರ್ ಪ್ಲಾನ್ ರೂಪಿಸುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು.

ವಿಧಾನಸಭೆಯಲ್ಲಿ ಬುಧವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ನೀರು ಸಮುದ್ರ ಸೇರಿದರೆ ಹೋದಂತೆಯೇ. ಎಲ್ಲೆಲ್ಲಿ ನೀರನ್ನು ತಡೆದು ಬಳಸಿಕೊಳ್ಳಲು ಸಾಧ್ಯವೋ ಅಲ್ಲಲ್ಲಿ ಬಳಸಿಕೊಳ್ಳಬೇಕು. . ಇದಕ್ಕಾಗಿ ಸಣ್ಣ ಅಣೆಕಟ್ಟುಗಳು, ಕಿಂಡಿ ಅಣೆಕಟ್ಟುಗಳ ನಿರ್ಮಾಣ ಹಾಗೂ ಉಪನದಿಗಳ ನೀರು ಸಂಗ್ರಹಕ್ಕೆ ವೈಜ್ಞಾನಿಕವಾಗಿ ಯೋಜನೆ ರೂಪಿಸಬೇಕು ಎಂದು ಹೇಳಿದರು. ಕರಾವಳಿಯ ಸಣ್ಣ ನದಿಗಳು ಹಾಗೂ ಉಪನದಿಗಳಿಗೆ ಸಣ್ಣ ಅಣೆಕಟ್ಟು ನಿರ್ಮಿಸುವ ‘ಪಶ್ಚಿಮ ವಾಹಿನಿ’ ಯೋಜನೆಯನ್ನು ಪುನರಾರಂಭಿಸುವಂತೆ ಶಾಸಕ ಸುನೀಲ್ ಕುಮಾರ್ ಒತ್ತಾಯಿಸಿದರು. ಸಣ್ಣ ನೀರಾವರಿ ಇಲಾಖೆ ಸಮೀಕ್ಷೆ ನಡೆಸಿ, ಈಗಿರುವ ಅಣೆಕಟ್ಟುಗಳು, ಇನ್ನಷ್ಟು ಕಡೆ ನೀರು ಸಂಗ್ರಹಿಸಲು ಸಾಧ್ಯ ಎಂಬುವುದನ್ನು ಹಾಗೂ ಇದಕ್ಕಾಗಿ ಅಗತ್ಯವಿರುವ ಸ್ಥಳಗಳನ್ನು ಗುರುತಿಸಬೇಕು ಎಂದು ಹೇಳಿದರು.

ಸಣ್ಣ ಅಣೆಕಟ್ಟುಗಳಿಂದ ಸ್ಥಳೀಯ ರೈತರಿಗೆ ನೀರಿನ ಲಭ್ಯತೆ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಲಿದೆ. ಜತೆಗೆ, ಕರಾವಳಿಯ ಹಳ್ಳ-ಕೊಳ್ಳಗಳಲ್ಲಿ ತುಂಬಿರುವ ಮರಳು ಮತ್ತು ಹೂಳು ತೆರವುಗೊಳಿಸಲು ಪ್ರತ್ಯೇಕ ಮರಳು ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು. ಮಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುಂಬೆ ಅಣೆಕಟ್ಟಿನ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವಂತೆ ಶಾಸಕ ಡಿ. ವೇದವ್ಯಾಸ ಕಾಮತ್ ಮನವಿ ಮಾಡಿದರು. ಕೈಗಾರಿಕೆಗಳಿಗೆ ಸಮುದ್ರದ ನೀರನ್ನು ಶುದ್ಧೀಕರಿಸಿ ಪೂರೈಸುವ ಪ್ರಾಯೋಗಿಕ ಯೋಜನೆ ರೂಪಿಸುವಂತೆಯೂ ಸಲಹೆ ನೀಡಿದರು.

ಮುಖ್ಯ ನದಿಗಳಿಗೆ ಸೇರುವ ಉಪನದಿಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿದರೆ ನೀರಿನ ಸಂಗ್ರಹದ ಜತೆಗೆ ಉಪ್ಪುನೀರು ನುಗ್ಗುವುದನ್ನೂ ತಡೆಯಬಹುದು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ವೈದ್ಯ ಸಲಹೆ ನೀಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ , ಸಂಬಂಧಿಸಿದ ಇಲಾಖೆಗಳು ಒಟ್ಟಾಗಿ ಕುಳಿತು ಕರಾವಳಿಯ ನೀರು ಸಂರಕ್ಷಣೆ, ಸಂಗ್ರಹ ಹಾಗೂ ಬಳಕೆಗೆ ಅಗತ್ಯವಿರುವ ಸ್ಥಳಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಸಮಗ್ರ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *