ಉದಯಕಾಲ ನ್ಯೂಸ್, ಬೆಂಗಳೂರು: ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರ (MVI) ನೇಮಕಾತಿ ಪ್ರಕ್ರಿಯೆಯಲ್ಲಿ ಸೇವಾನುಭವ ಪ್ರಮಾಣಪತ್ರದ (Experience Letter) ಗೊಂದಲಗಳ ಕಾರಣ ನೀಡಿ ಅಭ್ಯರ್ಥಿಗಳ ಅರ್ಜಿಗಳನ್ನು ರದ್ದುಗೊಳಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಈ ಐತಿಹಾಸಿಕ ತೀರ್ಪಿನಿಂದಾಗಿ ಕಳೆದ ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿದ್ದ ನೂರಾರು ಅಭ್ಯರ್ಥಿಗಳು ನಿರಾಳರಾಗಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಆರ್. ದೇವದಾಸ್ ಹಾಗೂ ನ್ಯಾಯಮೂರ್ತಿ ಡಾ. ಕೆ. ಮನ್ಮಧ ರಾವ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಸಾರಿಗೆ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಅಭ್ಯರ್ಥಿಗಳ ಅರ್ಜಿಗಳನ್ನು ಪುರಸ್ಕರಿಸಿದೆ. ಅಲ್ಲದೆ, ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ಮುಂದಿನ ಎರಡು ತಿಂಗಳ ಒಳಗಾಗಿ ನೇಮಕಾತಿ ಆದೇಶ ನೀಡುವಂತೆ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ನಿರ್ದೇಶಿಸಿದೆ.
ನಿಯಮಾವಳಿ ಗೊಂದಲ ಅಭ್ಯರ್ಥಿಗಳಿಗೆ ಲಾಭ
ನೇಮಕಾತಿ ಪ್ರಕ್ರಿಯೆಯ ನಿಯಮಾವಳಿಯಲ್ಲಿ ಗೊಂದಲವಿದ್ದಾಗ ಅದರ ಲಾಭ ಆಡಳಿತಕ್ಕಲ್ಲ, ಬದಲಿಗೆ ಅಭ್ಯರ್ಥಿಗಳಿಗೆ ಸಿಗಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.ಭಾರತದಲ್ಲಿ ಪೆಟ್ರೋಲ್ ಚಾಲಿತ ಭಾರಿ ವಾಹನಗಳೇ ಚಾಲ್ತಿಯಲ್ಲಿಲ್ಲದಿರುವಾಗ, ಇಂತಹ ಅಸಾಧ್ಯವಾದ ನಿಯಮಗಳನ್ನು ನೆಪವಾಗಿಟ್ಟುಕೊಂಡು ಅರ್ಹ ಅಭ್ಯರ್ಥಿಗಳ ಆಯ್ಕೆಯನ್ನು ನಿರಾಕರಿಸುವುದು ನ್ಯಾಯಸಮ್ಮತವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.ಅಭ್ಯರ್ಥಿಯು ವಿಭಿನ್ನ ಗ್ಯಾರೇಜ್‌ಗಳಲ್ಲಿ ಗಳಿಸಿದ ಒಟ್ಟು ಅನುಭವದ ಅವಧಿ 1 ವರ್ಷ ತಲುಪಿದರೆ ಅದನ್ನು ಅರ್ಹತೆ ಎಂದು ಪರಿಗಣಿಸಬೇಕು ಎಂದು ತಿಳಿಸಲಾಗಿದೆ.
ಈ ಅಭ್ಯರ್ಥಿಗಳಿಗೆ ಈಗಾಗಲೇ ನೇಮಕಗೊಂಡ ಅಭ್ಯರ್ಥಿಗಳಂತೆಯೇ ಕಾನೂನಿನ ಚೌಕಟ್ಟಿನಲ್ಲಿ ಹಿರಿತನ ಸೇರಿ ಎಲ್ಲ ರೀತಿಯ ಸೇವಾ ಸೌಲಭ್ಯಗಳನ್ನು ವಿಸ್ತರಿಸಬೇಕು. ದಾಖಲೆ ಕೊರತೆ ಅಥವಾ ಗ್ಯಾರೇಜ್ ಭೌತಿಕ ಪರಿಶೀಲನೆಯ ನೆಪದಲ್ಲಿ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳು ಮರುಪರಿಶೀಲನೆ ನಡೆಸಿ ಸಾರಿಗೆ ಆಯುಕ್ತರಿಗೆ ವರದಿ ಸಲ್ಲಿಸಬೇಕು ಎಂದೂ ಸೂಚಿಸಲಾಗಿದೆ.
ನೆನೆಗುದಿಗೆ ಬಿದ್ದಿದ್ದ ಪ್ರಕರಣ
ಸಾರಿಗೆ ಇಲಾಖೆಯಲ್ಲಿ ಖಾಲಿ ಇದ್ದ 150 ಮೋಟಾರು ವಾಹನ ನಿರೀಕ್ಷಕ ಹುದ್ದೆಗಳ ಭರ್ತಿಗೆ 2016ರ ಫೆಬ್ರವರಿಯಲ್ಲಿ ಕೆಪಿಎಸ್‌ಸಿ (KPSC) ಅರ್ಜಿ ಆಹ್ವಾನಿಸಿತ್ತು. ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಹೊಂದಿರುವ ಲಘು ವಾಹನ, ಭಾರಿ ಸರಕು ಮತ್ತು ಪ್ರಯಾಣಿಕ ವಾಹನಗಳ ದುರಸ್ತಿ ಕಾರ್ಯಾಗಾರದಲ್ಲಿ ಕನಿಷ್ಠ 1 ವರ್ಷ ಸೇವಾ ಅನುಭವ ಹೊಂದಿರಬೇಕು ಎಂಬ ಕಟ್ಟುನಿಟ್ಟಿನ ನಿಯಮವಿತ್ತು.
ಆದರೆ, ಭಾರತದಲ್ಲಿ ಪೆಟ್ರೋಲ್‌ನಿಂದ ಚಲಿಸುವ ಭಾರಿ ವಾಹನಗಳು ಇಲ್ಲದಿರುವುದರಿಂದ ಮತ್ತು ವಿವಿಧ ಗ್ಯಾರೇಜ್‌ಗಳ ಅನುಭವವನ್ನು ಪ್ರತ್ಯೇಕವಾಗಿ ಲೆಕ್ಕಹಾಕಿ ಕೆಪಿಎಸ್‌ಸಿ ಹಾಗೂ ಸಾರಿಗೆ ಇಲಾಖೆಯು ಹಲವು ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಗೊಳಿಸಿತ್ತು. ಇದನ್ನು ಕೆಎಟಿ ಕೂಡ ಎತ್ತಿಹಿಡಿದಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.ಈಗ ಉಚ್ಛ ನ್ಯಾಯಾಲಯ ಅಭ್ಯರ್ಥಿಗಳ ಪರವಾಗಿ ತೀರ್ಪು ನೀಡಿರುವುದು ಅವರ ಮುಖದಲ್ಲಿ ಮಂದಹಾಸ ಮೂಡಿದೆ.
#MotorVehicleInspector #KarnatakaHighCourt #Udayakala #KPSC #TransportDepartment #KAT #GovernmentJobs #KarnatakaNews

