ಉದಯಕಾಲ ನ್ಯೂಸ್, ಹಾಸನ: ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಹಾಕಿದ ಸ್ಥಿತಿಯಲ್ಲಿ ವೃದ್ಧೆಯೊಬ್ಬರ ಶವ ನಾಲೆಯಲ್ಲಿ ಪತ್ತೆಯಾಗಿರುವ ದಾರುಣ ಘಟನೆ ಅರಕಲಗೂಡು ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಬಳಿ ನಡೆದಿದೆ. ಹಿರೀಹಳ್ಳಿಕೊಪ್ಪಲು ಗ್ರಾಮದ ನಿವಾಸಿ ಲಕ್ಷ್ಮಮ್ಮ (67) ಮೃತ ದುರ್ದೈವಿ.
ಕಾಣೆಯಾಗಿದ್ದ ವೃದ್ಧೆ
ಲಕ್ಷ್ಮಮ್ಮ ಅವರು ತಮ್ಮ ಪತಿ ಅಣ್ಣೇಗೌಡ ಅವರೊಂದಿಗೆ ವಾಸವಾಗಿದ್ದರು. ಕಳೆದ ಶನಿವಾರ (ಅ.3) ವಿಜಯಕೊಪ್ಪಲು ಗ್ರಾಮಕ್ಕೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಅವರು ವಾಪಸ್ ಮನೆಗೆ ಮರಳಿರಲಿಲ್ಲ. ಈ ಕುರಿತು ಪತಿ ಅಣ್ಣೇಗೌಡ ಅವರು ಮಂಗಳವಾರ ಕೊಣನೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ಚೀಲದಲ್ಲಿ ಶವ ಪತ್ತೆ
ದೂರು ದಾಖಲಾದ ಬೆನ್ನಲ್ಲೇ ಬೆಟ್ಟದಹಳ್ಳಿ ಗ್ರಾಮದ ಬಳಿಯ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದೊಳಗೆ ತುಂಬಿರುವ ಸ್ಥಿತಿಯಲ್ಲಿ ಲಕ್ಷ್ಮಮ್ಮ ಅವರ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ವೃದ್ಧೆಯನ್ನು ಕೊಲೆ ಮಾಡಿ, ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ನಂತರ ಶವವನ್ನು ಚೀಲದಲ್ಲಿ ಕಟ್ಟಿ ನಾಲೆಗೆ ಎಸೆದಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಹಾಗೂ ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಮಹಜರು ನಡೆಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಪೂರ್ಣ ವರದಿಯ ಬಳಿಕವಷ್ಟೇ ಸಾವಿಗೆ ಸ್ಪಷ್ಟ ಕಾರಣ ಹಾಗೂ ಸತ್ಯಾಂಶ ಹೊರಬರಬೇಕಿದೆ.
#HassanNews #Udayakala #HassanPolice #CrimeNews #KarnatakaNews #Arakalagudu #MurderMystery #KonanuruPolice

