ರಾಯಚೂರು ನಗರ ಹೊರವಲಯದ ನ್ಯಾಷನಲ್ ಲೇಔಟ್‌ನಲ್ಲಿರುವ ವಸತಿ ಗೃಹದ ಮೇಲೆ ಪೊಲೀಸರು ದಾಳಿ ನಡೆಸಿ, ವೇಶ್ಯಾವಾಟಿಕೆ ಅಕ್ರಮ ದಂಧೆಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ರಾಯಚೂರು ಪೊಲೀಸ್ ಠಾಣೆಯ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದು, ದಂಧೆಗೆ ಬಲವಂತವಾಗಿ ಬಳಸಿಕೊಳ್ಳಲಾಗಿದ್ದ ಒಬ್ಬ ಮಹಿಳೆಯನ್ನು ರಕ್ಷಿಸಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಗಂಗಾಧರ, ಶ್ಯಾಮಣ್ಣ ಮತ್ತು ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.
ಈ ವಸತಿಗೃಹದಲ್ಲಿ ಕೆಲವು ಸಮಯದಿಂದ ವೇಶ್ಯಾವಾಟಿಕೆ ನಡೆಯುತ್ತಿತ್ತು. ಆರೋಪಿಗಳು ಹೆಣ್ಣು ಮಕ್ಕಳಿಗೆ ಉತ್ತಮ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸದಿಂದ ಇಂತಹ ಅಕ್ರಮ ಚಟುವಟಿಕೆಗೆ ದೂಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ರಕ್ಷಿಸಲಾದ ಮಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದ್ದು, ಮಾನವ ಸಾಗಾಟ ಮತ್ತು ವೇಶ್ಯಾವಾಟಿಕೆಯಂತಹ ಸಾಮಾಜಿಕ ಪಿಡುಗುಗಳನ್ನು ನಿವಾರಿಸುವುದು ನಮ್ಮ ಗುರಿಯಾಗಿದೆ. ಸಾರ್ವಜನಿಕರು ಅನುಮಾನಾಸ್ಪದ ಚಟುವಟಿಕೆಗಳ ಮಾಹಿತಿ ನೀಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.


