ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ನಿಂದ ಅಮಾನತುಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಡಿಕೆ ಶಿವಕುಮಾರ್ ರಾಜೀನಾಮೆಯನ್ನು ಅಂಗೀಕರಿಸಿದ್ದರು. ಸುರ್ಜೇವಾಲಾ ಅವರು ಸಚಿವರಾದ ಜಮೀರ್ ಅಹಮದ್, ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹ್ಮದ್ ವಿರುದ್ಧ ವರದಿ ಸಮೇತ ಹೈಕಮಾಂಡ್ಗೆ ದೂರು ಸಲ್ಲಿಸಿ, ಮೂವರ ವಿರುದ್ಧ ಕ್ರಮ
ವಹಿಸುವಂತೆ ಕೋರಿದ್ದರು.
ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್ಸಿ ನಸೀರ್ ಅಹ್ಮದ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜೀನಾಮೆ ಕೊಡುವಂತೆ ನಜೀರ್ ಅಹ್ಮದ್ಗೆ ಡೆಡ್ಲೈನ್ ನೀಡಿದ್ದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಸಮರ್ಥ್ ಅವರನ್ನು ಸೋಲಿಸಲು ವಿರೋಧ ಪಕ್ಷದ ಮುಖಂಡರ ಜೊತೆಗೆ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರಯತ್ನ ನಡೆಸಿದ್ದಾರೆ ಎಂದು ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ದಾವಣಗೆರೆ ದಕ್ಷಿಣದಲ್ಲಿ ಬಂಡಾಯ ಎದ್ದಾಗ ಅದನ್ನು ಶಮನ ಮಾಡುವ ಜವಾಬ್ದಾರಿಯನ್ನು ಆರಂಭದಲ್ಲಿ ನಸೀರ್ ಅಹ್ಮದ್ ಅವರಿಗೆ ನೀಡಲಾಗಿತ್ತು. ಒಪ್ಪಿ ದಾವಣಗೆರೆ ತೆರಳಲು ಮುಂದಾಗಿದ್ದರು. ಬಳಿಕ ಹಿಂದೇಟು ಹಾಕಿದರು, ಪ್ರಚಾರದಲ್ಲೂ ತೊಡಗಿಸಿಕೊಳ್ಳದೆ ಅಂತರ ಕಾಯ್ದುಕೊಂಡರು ಎಂಬ ಮಾಹಿತಿ ಇದೆ.


