ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಕುಖ್ಯಾತ ಲಷ್ಕರ್-ಎ-ತೊಯ್ಬಾ ಸಂಘಟನೆಯ ಉಗ್ರ ಲತೀಫ್ ಭಟ್ ಹಾಗೂ ಮತ್ತೊಬ್ಬ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಕಳೆದ ಕೆಲವು ದಿನಗಳ ಹಿಂದೆ ಸಿಆರ್‌ಪಿಎಫ್ ಶಿಬಿರದ ಮೇಲೆ ನಡೆದ ದಾಳಿ ಹಾಗೂ ಸರಣಿ ಭಯೋತ್ಪಾದಕ ಕೃತ್ಯಗಳಲ್ಲಿ ಈ ಉಗ್ರರು ಭಾಗಿಯಾಗಿದ್ದರು. ಈ ಯಶಸ್ವಿ ಕಾರ್ಯಾಚರಣೆಯು ಕಾಶ್ಮೀರ ಕಣಿವೆಯಲ್ಲಿ ಉಗ್ರರ ಹುಟ್ಟಡಗಿಸುವ ನಿಟ್ಟಿನಲ್ಲಿ ಭದ್ರತಾ ಪಡೆಗಳ ಮಹತ್ವದ ಹೆಜ್ಜೆಯಾಗಿದೆ.
ಸರಣಿ ಹತ್ಯೆಗಳು, ಮಾಸ್ಟರ್‌ಮೈಂಡ್ ಲತೀಫ್ ಭಟ್ ಹತ್ಯೆ
ಕುಲ್ಗಾಮ್ ನಿವಾಸಿಯಾದ ಲತೀಫ್ ಭಟ್, ಸ್ಥಳೀಯ ಬೆಂಬಲಿಗರ ನೆರವಿನಿಂದ ದಕ್ಷಿಣ ಕಾಶ್ಮೀರದ ವಿವಿಧ ಅಡಗುತಾಣಗಳಲ್ಲಿ ಪಾಕಿಸ್ತಾನಿ ಉಗ್ರರೊಂದಿಗೆ ಸೇರಿಕೊಂಡು ಸಕ್ರಿಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದ. ಇತ್ತೀಚಿನ ಹಲವು ಗಂಭೀರ ಪ್ರಕರಣಗಳಲ್ಲಿ ಇವನ ಕೈವಾಡವಿತ್ತು. ಪ್ರಮುಖವಾಗಿ, ಜುಲೈ 22ರಂದು ಅನಂತನಾಗ್‌ನ ಲಾಲ್ ಚೌಕ್ ಪ್ರದೇಶದಲ್ಲಿ ನಡೆದ ಪೊಲೀಸ್ ಕಾನ್‌ಸ್ಟೇಬಲ್ ಹತ್ಯೆ ಹಾಗೂ ಜುಲೈ 31ರಂದು ಕುಲ್ಗಾಮ್‌ನಲ್ಲಿ ನಡೆದಿದ್ದ ಅಮಾಯಕ ವಲಸೆ ಕಾರ್ಮಿಕರ ಹತ್ಯೆ ಸೇರಿದಂತೆ 2026ರಲ್ಲಿ ನಡೆದ ಹಲವಾರು ಸರಣಿ ಭಯೋತ್ಪಾದಕ ದಾಳಿಗಳಲ್ಲಿ ಲತೀಫ್ ಭಟ್ ಪ್ರಮುಖ ಆರೋಪಿಯಾಗಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಕಳೆದ ವಾರ ನವೆಂಬರ್ 11ರಂದು ಕುಲ್ಗಾಮ್‌ನ ಮೀರ್ ಬಜಾರ್ ಬಳಿಯ ಸಿಆರ್‌ಪಿಎಫ್ ಶಿಬಿರದ ಮೇಲೆ ಭಾರಿ ಶಸ್ತ್ರಸಜ್ಜಿತರಾಗಿ ನುಗ್ಗಿದ್ದ ಇಬ್ಬರು ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಹೇಡಿತನದ ದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದರು. ಅವರಲ್ಲಿ ಒಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ದಾಳಿಯ ನಂತರ ಉಗ್ರರು ಸಮೀಪದ ದಟ್ಟ ಅರಣ್ಯ ಪ್ರದೇಶಕ್ಕೆ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ ಹಾಗೂ ಸೇನಾ ಘಟಕಗಳು ಜಂಟಿಯಾಗಿ ಬೃಹತ್ ಶೋಧ ಕಾರ್ಯವನ್ನು ಆರಂಭಿಸಿದ್ದವು.
ಎಸ್‌ಪಿಒಗಳ ಹತ್ಯೆ: ಕಣಿವೆಯಲ್ಲಿ ಹೈ ಅಲರ್ಟ್ ಘೋಷಣೆ
ಕುಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ಕೇವಲ 24 ಗಂಟೆಗಳ ಒಳಗಾಗಿ, ಕಿಶ್ತ್ವಾರ್ ಜಿಲ್ಲೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ಸೇನೆಯೊಂದಿಗೆ ತೆರಳುತ್ತಿದ್ದ ವಿಶೇಷ ಪೊಲೀಸ್ ಅಧಿಕಾರಿಗಳಾದ ಬಾಬಿ ಚಂದ್ ಮತ್ತು ಯಶ್‌ಪಾಲ್ ಕುಮಾರ್ ಇವರನ್ನು ಉಗ್ರರು ಹತ್ಯೆ ಮಾಡಿದ್ದರು. ಈ ಸರಣಿ ಘಟನೆಗಳಿಂದ ಎಚ್ಚೆತ್ತ ಭದ್ರತಾ ಪಡೆಗಳು ಕಣಿವೆಯಾದ್ಯಂತ ಕಾವಲು ತೀವ್ರಗೊಳಿಸಿದ್ದವು.
ಕುಲ್ಗಾಮ್‌ನಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ, ಇಡೀ ಪ್ರದೇಶವನ್ನು ಇತರ ಭದ್ರತಾ ಪಡೆಗಳು ಸಂಪೂರ್ಣವಾಗಿ ಸುತ್ತುವರೆದು ನಡೆಸಿದ ಈ ಕಾರ್ಯಾಚರಣೆಯಲ್ಲಿ ಲತೀಫ್ ಭಟ್ ಹಾಗೂ ಮತ್ತೊಬ್ಬ ಉಗ್ರ ಹತ್ಯೆಗೀಡಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಹತ್ಯೆಯಾದ ಮತ್ತೊಬ್ಬ ಉಗ್ರನ ಗುರುತು ಮತ್ತು ಆತನ ಹಿನ್ನೆಲೆಯ ಕುರಿತು ಹೆಚ್ಚಿನ ವಿವರಗಳನ್ನು ಕಲೆಹಾಕಲಾಗುತ್ತಿದೆ. ಕಳೆದ ವಾರದ ಸರಣಿ ದಾಳಿಗಳ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತಾ ಪಡೆಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಸಿಆರ್‌ಪಿಎಫ್ ವಿಶೇಷ ಮಹಾನಿರ್ದೇಶಕ (SDG) ಸಂದೀಪ್ ಖಿರ್ವಾರ್ ಸ್ಪಷ್ಟಪಡಿಸಿದ್ದಾರೆ.
#KulgamEncounter #JammuAndKashmir #LashkarEToyba #LatiefBhat #CRPF #IndianArmy #Udayakala #Terrorism #SecurityForces


