Saturday, November 21, 2026
Menu

ರೈತರಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ: ಕ್ಯೂಆರ್ ಕೋಡಿನ ಅರ್ಜಿಯಲ್ಲಿ 8 ಭೂ ದಾಖಲೆಗಳು ಲಭ್ಯ

ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯದ ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಕಂದಾಯ ಇಲಾಖೆ ಕಚೇರಿಗಳಿಗೆ ಪದೇ ಪದೇ ಅಲೆದಾಡುವುದನ್ನು ತಪ್ಪಿಸಲು ಹಾಗೂ ಭೂ ದಾಖಲೆಗಳ ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ದೇಶದಲ್ಲೇ ಅತ್ಯಂತ ವಿನೂತನ ಹೆಜ್ಜೆಯೊಂದನ್ನು ಇಟ್ಟಿದೆ. ಕಂದಾಯ ಇಲಾಖೆಯು ಶೀಘ್ರದಲ್ಲೇ ಕ್ಯೂಆರ್ ಕೋಡ್ ಆಧಾರಿತ ಹೊಸ ಮಾದರಿಯ ‘ನಮೂನೆ 16-A’ ಸಮಗ್ರ ಪಹಣಿಯನ್ನು ಜಾರಿಗೆ ತರಲು ಸಜ್ಜಾಗಿದ್ದು, ಇದರಡಿ ಒಂದೇ ದಾಖಲೆಯಲ್ಲಿ 8 ಪ್ರಮುಖ ಭೂ ದಾಖಲೆಗಳು ರೈತರ ಕೈಸೇರಲಿವೆ.

ಒಂದೇ ಅರ್ಜಿಯಲ್ಲಿ 8 ಮಹತ್ವದ ದಾಖಲೆಗಳು ಲಭ್ಯ

ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣಕ್ಕೆ ಒತ್ತು ನೀಡಿರುವ ರಾಜ್ಯ ಸರ್ಕಾರ, ರೈತರಿಗೆ ಸುಲಭವಾಗಿ ಹಾಗೂ ಒಂದೇ ಸೂರಿನಡಿ ಎಲ್ಲಾ ಮಾಹಿತಿ ಲಭ್ಯವಾಗುವಂತೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಹೊಸದಾಗಿ ಜಾರಿಗೆ ಬರುತ್ತಿರುವ ಪರಿಷ್ಕೃತ ‘ನಮೂನೆ 16-A’ ಸಮಗ್ರ ಪಹಣಿಯಲ್ಲಿ ಒಟ್ಟು 8 ಪ್ರಮುಖ ಭೂ ದಾಖಲೆಗಳನ್ನು ಒಂದೇ ಫಾರ್ಮ್‌ನಲ್ಲಿ ನೀಡಲು ತೀರ್ಮಾನಿಸಲಾಗಿದೆ. ಅವುಗಳೆಂದರೆ:

1. ಪಹಣಿ (RTC)
2. ಆಕಾರ್ ಬಂದ್ (Aakarband)
3. ಭೂ ನಕ್ಷೆ (Survey Sketch)
4. ಕೈ ಬರಹದ ಪಹಣಿ ವಿವರ
5. ಋಣಭಾರ ಪ್ರಮಾಣ ಪತ್ರ (EC – Encumbrance Certificate)
6. ಎಸ್‌ಎಸ್‌ಎಲ್‌ಆರ್ (SSLR) ದಾಖಲೆ
7. ಮ್ಯುಟೇಷನ್ (Mutation) ವಿವರಗಳು
8. ರೈತನ ಭಾವಚಿತ್ರ ಮತ್ತು ಆಧಾರ್ ಜೋಡಣೆ ವಿವರ

ಈ ವ್ಯವಸ್ಥೆಯಿಂದಾಗಿ ರೈತರು ಸಾಲ ಸೌಲಭ್ಯ ಪಡೆಯಲು, ಜಮೀನು ಪರಭಾರೆ ಮಾಡಲು ಅಥವಾ ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ದಾಖಲೆಗಳಿಗಾಗಿ ಕಚೇರಿಗಳಿಗೆ ಸುತ್ತಾಡುವ ಅನಿವಾರ್ಯತೆ ತಪ್ಪಲಿದೆ.

ದೇಶದಲ್ಲೇ ಮೊದಲ ಪ್ರಯೋಗ: ಡಿಸಿಎಂ ಜಿ. ಪರಮೇಶ್ವರ್ ಮಾಹಿತಿ

ಈ ಮಹತ್ವಾಕಾಂಕ್ಷಿ ಯೋಜನೆಯ ಕುರಿತು ವಿವರ ನೀಡಿರುವ ಡಿಸಿಎಂ ಹಾಗೂ ಕಂದಾಯ ಸಚಿವ ಜಿ. ಪರಮೇಶ್ವರ್ ಅವರು, ನಮೂನೆ 16-A ಭೂಮಿಗೆ ಸಂಬಂಧಿಸಿದ ಒಂದು ಸಮಗ್ರ ದಾಖಲೆಯಾಗಿದೆ. ಇದರಲ್ಲಿ ರೈತನ ಫೋಟೋ, ನಕ್ಷೆ, ಇ.ಸಿ., ಆಕಾರ್ ಬಂದ್, ಮ್ಯುಟೇಷನ್ ವಿವರಗಳು ಸೇರಿದಂತೆ ಭೂಮಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯ ಕ್ಯೂಆರ್ ಕೋಡ್ ಒಂದೇ ದಾಖಲೆಯಲ್ಲಿ ಇರುತ್ತದೆ. ಇದು ದೇಶದಲ್ಲೇ ಮೊದಲ ಪರಿಕಲ್ಪನೆ ಹಾಗೂ ವಿನೂತನ ಪ್ರಯೋಗವಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ತಂಡವೂ ರಾಜ್ಯಕ್ಕೆ ಭೇಟಿ ನೀಡಿ ಈ ಮಾದರಿಯ ಬಗ್ಗೆ ಅಧ್ಯಯನ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.

ಮುಂದಿನ 3 ತಿಂಗಳಲ್ಲಿ 1 ಕೋಟಿ ಪಹಣಿ ಸಿದ್ಧಪಡಿಸುವ ಗುರಿ

ರಾಜ್ಯದಲ್ಲಿ ಒಟ್ಟು 2.1 ಕೋಟಿಗೂ ಅಧಿಕ ಪಹಣಿಗಳಿದ್ದು, ಈ ಪೈಕಿ ಈಗಾಗಲೇ 9.59 ಲಕ್ಷ ಪಹಣಿಗಳು ನಮೂನೆ 16-A ಅಡಿಯಲ್ಲಿ ಸಿದ್ಧಗೊಂಡಿವೆ. ಮುಂದಿನ ಮೂರು ತಿಂಗಳ ಒಳಗಾಗಿ ಕನಿಷ್ಠ 1 ಕೋಟಿ ಪಹಣಿಗಳನ್ನು 16-A ವ್ಯಾಪ್ತಿಗೆ ತರಬೇಕು ಎಂಬ ಕಟ್ಟುನಿಟ್ಟಿನ ಗುರಿಯನ್ನು ಕಂದಾಯ ಇಲಾಖೆ ನಿಗದಿಪಡಿಸಿಕೊಂಡಿದೆ. ರಾಜ್ಯದಲ್ಲಿ ಏಕ ಮಾಲೀಕತ್ವ ಹೊಂದಿರುವ ಸುಮಾರು 1.50 ಕೋಟಿ ಪಹಣಿಗಳಿದ್ದು, ಮೊದಲ ಹಂತದಲ್ಲಿ ಅವುಗಳನ್ನು ನಮೂನೆ 16-A ಮೂಲಕ ಅತ್ಯಂತ ಶೀಘ್ರವಾಗಿ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪರಿಷ್ಕೃತ ನಮೂನೆ 16-A ನಲ್ಲಿ ನೀಡಲಾಗುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಕ್ಕು ದಾಖಲೆ (ಪಹಣಿ), ಹಳೆಯ ವಹಿವಾಟಿನ ಮ್ಯುಟೇಶನ್ ರೆಜಿಸ್ಟರ್, ಆಕಾರ್‌ಬಂದ್, ಸರ್ವೆ ನಕ್ಷೆ ಹಾಗೂ ಋಣಭಾರಕ್ಕೆ (EC) ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ತಕ್ಷಣವೇ ಪರಿಶೀಲಿಸಬಹುದು. ಈ ನಮೂನೆಯು ಭೂ-ಉಲ್ಲೇಖಿತ ಕ್ಯಾಡಾಸ್ಟ್ರಲ್/ಸರ್ವೆ ನಕ್ಷೆ, ಸರ್ವೆ ನಂಬರ್ ಮತ್ತು ಹಿಸ್ಸಾದ ಸ್ಥೂಲ ನಕ್ಷೆ, ವಿಶಿಷ್ಟ ಭೂ ಗುರುತಿನ ಸಂಖ್ಯೆ ಯು.ಎಲ್.ಪಿ.ಐ.ಎನ್ ಹಾಗೂ ಓಪನ್ ಲೊಕೇಶನ್ ಕೋಡ್ ಅನ್ನು ಒಳಗೊಂಡಿರಲಿದೆ.
ಡಿಜಿಟಲ್ ರೂಪದಲ್ಲಿ ದೃಢೀಕರಿಸಲಾದ ಆಕಾರ್‌ಬಂದ್‌ನೊಂದಿಗೆ ಇದನ್ನು ಜೋಡಿಸಲಾಗಿದ್ದು, ಭೂಮಿಯ ವಿಸ್ತೀರ್ಣ, ವರ್ಗೀಕರಣದ ನಿಖರ ಮಾಹಿತಿ ಲಭ್ಯವಿರುತ್ತದೆ. ಅಲ್ಲದೆ, ಕಾನೂನು ಮತ್ತು ಗೌಪ್ಯತೆಯ ನಿಯಮಗಳಿಗೆ ಒಳಪಟ್ಟು ಖಾತೆದಾರರ ಆಧಾರ್-ಜೋಡಣೆಗೊಂಡ ವಿವರಗಳನ್ನು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಅಧಿಕೃತ ಡಿಜಿಟಲ್ ಭೂ-ದಾಖಲೆ ನಿರ್ವಹಣಾ ವ್ಯವಸ್ಥೆಯ ಮೂಲಕವೇ ನಮೂನೆ 16-A ಅನ್ನು ಜನರೇಟ್ ಮಾಡಬಹುದು ಮತ್ತು ಸಕ್ಷಮ ಪ್ರಾಧಿಕಾರದಿಂದ ಡಿಜಿಟಲ್ ರೂಪದಲ್ಲೇ ದೃಢೀಕರಿಸಲು ಇದು ಸಮರ್ಥವಾಗಿರಲಿದೆ. ಇದರಿಂದ ನಕಲಿ ದಾಖಲೆಗಳ ಹಾವಳಿಗೂ ಸಂಪೂರ್ಣ ಕಡಿವಾಣ ಬೀಳಲಿದೆ.

#KarnatakaFarmers #LandRecords #Form16A #QRCodeRTC #DigitalKarnataka #RevenueDepartment #GParameshwara #BhoomiKarnataka #KarnatakaGovernment #UdayakalaNews

Related Posts

Leave a Reply

Your email address will not be published. Required fields are marked *