Saturday, November 21, 2026
Menu

ಮಹಿಳಾ ಕಾರ್ಮಿಕರ ಸಂಘಟಿತ ಹೋರಾಟಕ್ಕೆ ಭರ್ಜರಿ ಜಯ: ಮರುನೇಮಕಾತಿ ಭರವಸೆಗೆ ಧರಣಿ ಕೈಬಿಟ್ಟ ಕಾರ್ಮಿಕರು

ಉದಯಕಾಲ ನ್ಯೂಸ್, ಮಂಗಳೂರು: ಯಾವುದೇ ಮುನ್ಸೂಚನೆಯಿಲ್ಲದೆ ಏಕಾಏಕಿ ಉದ್ಯೋಗ ಕಳೆದುಕೊಂಡು ಕಳೆದ 81 ದಿನಗಳಿಂದ ಸುರತ್ಕಲ್ ಸಮೀಪದ ಬಾಳದಲ್ಲಿರುವ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಘಟಕದ ಗೇಟ್ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ನಾಲ್ವರು ಕನ್ನಡಿಗ ಮಹಿಳಾ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಕೊನೆಗೂ ಐತಿಹಾಸಿಕ ಯಶಸ್ಸು ಲಭಿಸಿದೆ. ಶರಣವ್ವ ಭಜಂತ್ರಿ, ಪಾರವ್ವ ಗಾಣಿಗೇರ, ಸೂರವ್ವ ಕೊಲ್ಲದ್ ಹಾಗೂ ಸುವರ್ಣ ಪಾಟೀಲ ಅವರನ್ನು ಮರಳಿ ಕೆಲಸಕ್ಕೆ ನೇಮಿಸಿಕೊಳ್ಳಲು ಎಚ್‌ಪಿಸಿಎಲ್ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಧರಣಿ ಸ್ಥಳದಲ್ಲಿ ಸಿಹಿ ಹಂಚಿ ಸಂಭ್ರಮಿಸುವ ಮೂಲಕ ಹೋರಾಟವನ್ನು ತಾತ್ಕಾಲಿಕವಾಗಿ ಮುಕ್ತಾಯಗೊಳಿಸಲಾಗಿದೆ.

ಕಾರ್ಮಿಕ ಇಲಾಖೆ ಸಂಧಾನ ಸಭೆಯಲ್ಲಿ ತೀರ್ಮಾನ

ಮಹಿಳಾ ಕಾರ್ಮಿಕರ ನಿರಂತರ ಹೋರಾಟ ಹಾಗೂ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಮಧ್ಯಪ್ರವೇಶದ ಫಲವಾಗಿ ಶುಕ್ರವಾರ ಕೇಂದ್ರ ಕಾರ್ಮಿಕ ಇಲಾಖೆಯ ಮಂಗಳೂರು ಉಪ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಮಹತ್ವದ ಸಂಧಾನ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರಮುಖವಾಗಿ ಮೂರು ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ
ಯಾವುದೇ ದಾಕ್ಷಿಣ್ಯವಿಲ್ಲದೆ ಕೆಲಸದಿಂದ ತೆಗೆದುಹಾಕಲ್ಪಟ್ಟಿದ್ದ ನಾಲ್ವರು ಮಹಿಳಾ ಗುತ್ತಿಗೆ ಕಾರ್ಮಿಕರನ್ನು ಮರುನೇಮಕ ಮಾಡಿಕೊಳ್ಳಲು ತಾವು ಸಿದ್ಧವಿರುವುದಾಗಿ ಎಚ್‌ಪಿಸಿಎಲ್ ಅಧಿಕಾರಿಗಳು ಸಭೆಯಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.ಉಪ ಕಾರ್ಮಿಕ ಆಯುಕ್ತರು ಡಿಸೆಂಬರ್ 2ರಂದು ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿಪಡಿಸಿದ್ದಾರೆ. ಅಷ್ಟರೊಳಗೆ ಈ ನಾಲ್ವರು ಮಹಿಳಾ ಕಾರ್ಮಿಕರ ಮರುನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಕಂಪನಿ ಅಧಿಕಾರಿಗಳು ಸ್ಪಷ್ಟ ಭರವಸೆ ನೀಡಿದ್ದಾರೆ. ನಾಲ್ವರು ಮಹಿಳೆಯರಿಗೆ ಹೌಸ್ ಕೀಪಿಂಗ್ ವಿಭಾಗದಲ್ಲಿ ಕೆಲಸ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದು, ಯಾವ ಗುತ್ತಿಗೆದಾರರ ಅಡಿಯಲ್ಲಿ ಕೆಲಸ ನಿರ್ವಹಿಸಬೇಕು ಎಂಬ ಅಂತಿಮ ತೀರ್ಮಾನ ಡಿಸೆಂಬರ್ 2ರ ಸಭೆಯಲ್ಲಿ ನಿರ್ಧಾರವಾಗಲಿದೆ. ಅಲ್ಲಿಯವರೆಗೆ ಧರಣಿ ಸ್ಥಳದಲ್ಲಿ ಕೂರುವುದು ಬೇಡ ಎಂದು ಹೋರಾಟದ ಮುಖಂಡರು ಹಾಗೂ ಅಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಮಹಿಳೆಯರು ಧರಣಿಯನ್ನು ಹಿಂಪಡೆದಿದ್ದಾರೆ.

ನಮಗೆ ಮರುಜೀವ ಸಿಕ್ಕಂತಾಗಿದೆ: ಕಾರ್ಮಿಕ ಮಹಿಳೆ ಶರಣವ್ವ ಭಾವುಕ ನುಡಿ

81 ದಿನಗಳ ಸುದೀರ್ಘ ಹೋರಾಟದ ಬಳಿಕ ಕೆಲಸದ ಭರವಸೆ ಸಿಕ್ಕಿರುವ ಕುರಿತು ಸಂತಸ ಹಂಚಿಕೊಂಡಿರುವ ಹೋರಾಟ ನಿರತ ಗುತ್ತಿಗೆ ಕಾರ್ಮಿಕ ಮಹಿಳೆ ಶರಣವ್ವ ಭಜಂತ್ರಿ ಅವರು, ಕಳೆದ ಮೂರು ತಿಂಗಳಿನಿಂದ ಕೆಲಸವಿಲ್ಲದೆ, ಯಾವುದೇ ದಾಕ್ಷಿಣ್ಯವಿಲ್ಲದೆ ನಾವು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಎಚ್‌ಪಿಸಿಎಲ್ ಪ್ಲಾಂಟ್ ಮ್ಯಾನೇಜರ್ ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ ನಮಗೆ ಕೆಲಸ ಕೊಡಿಸುವಂತೆ ಸೂಚಿಸಿದ್ದರು. ಕಾರ್ಮಿಕ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ನಮಗೆ ಹೌಸ್ ಕೀಪಿಂಗ್ ಕೆಲಸ ನೀಡುವ ಭರವಸೆ ಸಿಕ್ಕಿದೆ. ಡಿಸೆಂಬರ್ 2ರ ಸಭೆಯಲ್ಲಿ ಗುತ್ತಿಗೆದಾರರು ಯಾರು ಎಂಬುದು ಅಂತಿಮವಾಗಲಿದ್ದು, ಅಲ್ಲಿಯವರೆಗೆ ಮನೆಯಲ್ಲಿರುವಂತೆ ಮುಖಂಡರು ತಿಳಿಸಿದ್ದಾರೆ. ಮುನೀರ್ ಕಾಟಿಪಳ್ಳ ಸೇರಿದಂತೆ ಎಲ್ಲಾ ಹೋರಾಟಗಾರರು ಹಾಗೂ ಜಿಲ್ಲಾಧಿಕಾರಿಗಳ ಸಹಕಾರದಿಂದ ನಮಗೆ ಮರುಜೀವ ಸಿಕ್ಕಂತಾಗಿದೆ ಎಂದು ಭಾವುಕರಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಸಂಘಟಿತ ಹೋರಾಟಕ್ಕೆ ಸಂದ ಜಯ: ಮುನೀರ್ ಕಾಟಿಪಳ್ಳ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ನಾಗರಿಕ ಹೋರಾಟ ಸಮಿತಿ (ಸುರತ್ಕಲ್) ಅಧ್ಯಕ್ಷ ಹಾಗೂ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರು, ಶರಣವ್ವ ಭಜಂತ್ರಿ, ಪಾರವ್ವ ಗಾಣಿಗೇರ, ಸೂರವ್ವ ಕೊಲ್ಲದ್, ಸುವರ್ಣ ಪಾಟೀಲ ಎಂಬ ಗುತ್ತಿಗೆ ಕಾರ್ಮಿಕ ಮಹಿಳೆಯರು ಕೊನೆಗೂ ಬದುಕುವ ಹಕ್ಕಿನ ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ. 81 ದಿನಗಳ ಅನಿರ್ದಿಷ್ಟಾವಧಿ ಧರಣಿ ಗೆಲುವಿನ ಸಮಾಧಾನದೊಂದಿಗೆ ಮುಕ್ತಾಯಗೊಂಡಿದೆ. ಜನಸಾಮಾನ್ಯರು ಮತ್ತು ದುಡಿಯುವ ಜನರಿಗೆ ಸಂಘಟಿತ ಹೋರಾಟವಲ್ಲದೆ ಬೇರೆ ದಾರಿಯಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಸಿಐಟಿಯು (CITU) ಹಾಗೂ ನಾಗರಿಕ ಹೋರಾಟ ಸಮಿತಿ (ಸುರತ್ಕಲ್) ನೇತೃತ್ವದಲ್ಲಿ ನಡೆದ ಈ ಹೋರಾಟಕ್ಕೆ ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ (DYFI) ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿದ್ದವು. ಮಾಜಿ ಶಾಸಕ ಮೊಯ್ದಿನ್ ಬಾವಾ, ಸಿಐಟಿಯು ರಾಜ್ಯ ನಾಯಕಿ ಮೀನಾಕ್ಷಿ ಸುಂದರಂ, ಜಿಲ್ಲಾ ಮುಖಂಡರಾದ ಬಿ.ಎಂ. ಭಟ್, ಸುನಿಲ್ ಕುಮಾರ್ ಬಜಾಲ್ ಅವರು ಹೋರಾಟಕ್ಕೆ ನಿರಂತರ ಮಾರ್ಗದರ್ಶನ ನೀಡಿದ್ದರು.

ಅಧಿಕೃತ ಲಿಖಿತ ಆದೇಶಕ್ಕಾಗಿ ಕಾಯುತ್ತಿದ್ದೇವೆ: ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್

ಮತ್ತೊಂದೆಡೆ, ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ಅವರು, ಮಹಿಳಾ ಕಾರ್ಮಿಕರ ಮರುನೇಮಕಾತಿ ಕುರಿತು ಚೆನ್ನೈನಲ್ಲಿರುವ ಎಚ್‌ಪಿಸಿಎಲ್ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ನಾವು ಹೇಳಿದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಆದರೆ, ಈ ಕುರಿತು ಇನ್ನೂ ಅಧಿಕೃತವಾಗಿ ಲಿಖಿತ ರೂಪದಲ್ಲಿ ಆದೇಶ ನಮಗೆ ಕೈಸೇರಿಲ್ಲ. ಲಿಖಿತ ಆದೇಶ ಬಂದ ಬಳಿಕವಷ್ಟೇ ನಾನು ಈ ಬಗ್ಗೆ ಅಂತಿಮವಾಗಿ ಪ್ರತಿಕ್ರಿಯಿಸುತ್ತೇನೆ. ಸದ್ಯ ಅದಕ್ಕಾಗಿ ಕಾಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
#HPCLProtest #MangaluruNews #Surathkal #ContractWorkers #WomenWorkersVictory #CITU #MuneerKatipalla #DakshinaKannada #WorkersRights #KarnatakaNews #UdayakalaNews

Related Posts

Leave a Reply

Your email address will not be published. Required fields are marked *