ಉದಯಕಾಲ ನ್ಯೂಸ್, ಹಾವೇರಿ: ರೋಗಿಗಳಿಗೆ ಚಿಕಿತ್ಸೆ ನೀಡಿ ಜೀವ ಉಳಿಸಬೇಕಾದ ಸರ್ಕಾರಿ ಜಿಲ್ಲಾಸ್ಪತ್ರೆಯೇ ಈಗ ಕಳ್ಳರು ಹಾಗೂ ಕಾಮುಕರ ಅಡ್ಡೆಯಾಗಿ ಮಾರ್ಪಟ್ಟಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಹಾವೇರಿಯಲ್ಲಿ ಎದುರಾಗಿದೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಧ್ಯರಾತ್ರಿ ವೇಳೆ ರೋಗಿಯೊಂದಿಗೆ ಉಳಿದುಕೊಂಡು ನಿದ್ರಿಸುತ್ತಿದ್ದ ಮಹಿಳೆಯ ಹಾಸಿಗೆಯೊಳಗೆ ನುಸುಳಿದ ಅಪರಿಚಿತ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದಲ್ಲದೆ, ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿರುವ ಬೆಚ್ಚಿಬೀಳಿಸುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಆಸ್ಪತ್ರೆಯ ವಾರ್ಡ್ ನಂಬರ್ 109ರಲ್ಲಿ ನಡೆದಿರುವ ಈ ಇಡೀ ದುಷ್ಕೃತ್ಯ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಮಧ್ಯರಾತ್ರಿ 2 ಗಂಟೆಗೆ ಬೆಡ್‌ಗೆ ನುಗ್ಗಿದ ಆರೋಪಿ: ಕೆನ್ನೆಗೆ ಬಾರಿಸಿದ ಮಹಿಳೆ
ರೋಗಿಯ ಆರೈಕೆಗಾಗಿ ಬಂದಿದ್ದ ಮಹಿಳೆಯು ರಾತ್ರಿ ವೇಳೆ ವಾರ್ಡ್ ನಂಬರ್ 109ರಲ್ಲಿ ನಿದ್ರೆಗೆ ಜಾರಿದ್ದರು. ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ವಾರ್ಡ್ ಒಳಗೆ ನುಗ್ಗಿದ ಆರೋಪಿಯು, ನಿದ್ರಿಸುತ್ತಿದ್ದ ಮಹಿಳೆಯ ಹಾಸಿಗೆಯೊಳಗೆ ನುಸುಳಿ ಅಸಭ್ಯವಾಗಿ ವರ್ತಿಸುವುದರ ಜೊತೆಗೆ ಆಕೆಯ ಮೊಬೈಲ್ ಮತ್ತು ಪರ್ಸ್ ಕಳ್ಳತನಕ್ಕೆ ಮುಂದಾಗಿದ್ದಾನೆ. ತಕ್ಷಣವೇ ಎಚ್ಚರಗೊಂಡ ಮಹಿಳೆ ಧೈರ್ಯ ತೋರಿ ಜೋರಾಗಿ ಕಿರುಚಾಡಿದ್ದಲ್ಲದೆ, ಆರೋಪಿಯ ಕೆನ್ನೆಗೆ ಬಾರಿಸಿ ಪ್ರತಿರೋಧ ತೋರಿದ್ದಾರೆ. ಮಹಿಳೆಯ ಕಿರುಚಾಟದಿಂದ ವಾರ್ಡ್‌ನಲ್ಲಿದ್ದ ಇತರರು ಎಚ್ಚೆತ್ತು ಆರೋಪಿಯನ್ನು ಹಿಡಿಯಲು ಮುಂದಾಗುತ್ತಿದ್ದಂತೆಯೇ ಆತ ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದ್ದಾನೆ. ಸದ್ಯ ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಹಾವೇರಿ ಜಿಲ್ಲಾಸ್ಪತ್ರೆ ಕಳ್ಳರ ತವರುಮನೆ: ಸಂತ್ರಸ್ತರ ಆಕ್ರೋಶ
ಜಿಲ್ಲಾಸ್ಪತ್ರೆಯಲ್ಲಿ ಮೊಬೈಲ್ ಕಳ್ಳತನ ನಡೆಯುತ್ತಿರುವುದು ಇದೇ ಮೊದಲೇನಲ್ಲ ಎಂದು ಸ್ಥಳೀಯರು ಹಾಗೂ ರೋಗಿಗಳ ಸಂಬಂಧಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ತಿಂಗಳು ಇಂತಹ ಎರಡು-ಮೂರು ಪ್ರಕರಣಗಳು ನಡೆಯುತ್ತಿದ್ದು, ಕಳೆದ ಒಂದೇ ವಾರದಲ್ಲಿ ಜಿಲ್ಲಾಸ್ಪತ್ರೆಯಲ್ಲಿ 10ಕ್ಕೂ ಅಧಿಕ ಮೊಬೈಲ್‌ಗಳು ಹಾಗೂ ನಗದು ಹಣ ಕಳ್ಳತನವಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಕುರಿತು ಆಕ್ರೋಶ ಹೊರಹಾಕಿರುವ ಮೊಬೈಲ್ ಕಳೆದುಕೊಂಡ ರೋಗಿಯ ಸಂಬಂಧಿ ಸಂತೋಷ್ ಅವರು, ನಾನು ನನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ 9 ದಿನಗಳಾಗಿವೆ. ಈ ಒಂಬತ್ತು ದಿನಗಳಲ್ಲಿ ಆರು ದಿನ ಮೊಬೈಲ್ ಕಳ್ಳತನವಾಗಿರುವ ಸುದ್ದಿಯನ್ನೇ ಕೇಳಿದ್ದೇನೆ. ರಾತ್ರಿ 12 ರಿಂದ 1 ಗಂಟೆಯ ಅವಧಿಯಲ್ಲಿ ನನ್ನ ಮೊಬೈಲ್ ಕೂಡ ಕಳವಾಗಿದೆ. ಈ ವಿಷಯ ಹೇಳಲು ಹೋದಾಗ ಮಹಿಳೆಯ ಪಕ್ಕದಲ್ಲೇ ಮಲಗಿ ಆರೋಪಿ ಅನುಚಿತವಾಗಿ ವರ್ತಿಸಿ ಮೊಬೈಲ್ ಕದ್ದಿರುವ ವಿಚಾರ ಗೊತ್ತಾಯಿತು. ಒಬ್ಬೊಬ್ಬರೇ ಮಹಿಳೆಯರು ರೋಗಿಗಳನ್ನು ನೋಡಿಕೊಳ್ಳಲು ಬಂದಿರುತ್ತಾರೆ. ಇಲ್ಲಿ ಯಾವ ಸೆಕ್ಯುರಿಟಿಯೂ ಇಲ್ಲ, ಕಳ್ಳರಿಗೆ ಭಯವೇ ಇಲ್ಲದಂತಾಗಿದ್ದು ಹಾವೇರಿ ಜಿಲ್ಲಾಸ್ಪತ್ರೆ ಕಳ್ಳರ ತವರುಮನೆಯಂತಾಗಿದೆ ಎಂದು ಕಿಡಿಕಾರಿದ್ದಾರೆ.
ಸೂಕ್ತ ಭದ್ರತೆಗೆ ಸಮಾಜ ಸೇವಕ ಅಬ್ದುಲ್ ಖಾದರ್ ಆಗ್ರಹ
ಘಟನೆ ಕುರಿತು ಮಾತನಾಡಿರುವ ಸಮಾಜ ಸೇವಕ ಅಬ್ದುಲ್ ಖಾದರ್ ಅವರು, ರೋಗಿಗಳು ಬೆಡ್ ಮೇಲೆ ಮಲಗಿದ್ದರೆ, ಅವರ ಸಂಬಂಧಿಕರು ಅನಿವಾರ್ಯವಾಗಿ ಬೆಡ್ ಕೆಳಗೆ ಮಲಗಿರುತ್ತಾರೆ. ಆರೋಪಿ ರಾತ್ರಿ ಎರಡು ಗಂಟೆಗೆ ವಾರ್ಡ್‌ಗೆ ಬಂದು ಪರ್ಸ್ ಕಳ್ಳತನದ ಜೊತೆಗೆ ಬೇರೆ ಕೆಟ್ಟ ಉದ್ದೇಶದಿಂದಲೇ ಮಹಿಳೆಯ ಬಳಿ ಬಂದಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬರುತ್ತದೆ. ಮಹಿಳೆ ಎಚ್ಚೆತ್ತು ಕೆನ್ನೆಗೆ ಬಾರಿಸಿದ್ದರಿಂದ ಆರೋಪಿ ಓಡಿಹೋಗಿದ್ದಾನೆ. ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಸೂಕ್ತ ಭದ್ರತಾ ಸಿಬ್ಬಂದಿ ನಿಯೋಜಿಸಿ ರೋಗಿಗಳು ಮತ್ತು ಮಹಿಳಾ ಅಟೆಂಡರ್‌ಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಆಸ್ಪತ್ರೆ ಆಡಳಿತ ಮಂಡಳಿ ಮತ್ತು ವೈದ್ಯಾಧಿಕಾರಿಗಳ ಸ್ಪಷ್ಟನೆ
ಈ ಪ್ರಕರಣದ ಕುರಿತು ದೂರವಾಣಿ ಮೂಲಕ ಪ್ರತಿಕ್ರಿಯಿಸಿರುವ ಜಿಲ್ಲಾಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ಪಿ.ಆರ್. ಹಾವನೂರು ಅವರು, ಘಟನೆಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಸಂಜೆ ನಮ್ಮ ಸಿಬ್ಬಂದಿ ಫೋನ್ ಮಾಡಿದಾಗ ತಿಳಿದಿದೆ, ಆದರೆ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ಯಾರೂ ನಮಗೆ ದೂರು ನೀಡಿಲ್ಲ. ಕಳ್ಳತನವಾದಾಗ ನಾವು ಸಿಸಿಟಿವಿ ದೃಶ್ಯ ತೋರಿಸುತ್ತೇವೆ, ಸಂತ್ರಸ್ತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಉಪ ಮುಖ್ಯವೈದ್ಯಾಧಿಕಾರಿ ಡಾ. ಪರಸಪ್ಪ ಚುರ್ಚಿಹಾಳ್ ಅವರು, ಜಿಲ್ಲಾಸ್ಪತ್ರೆಯಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿಂದೆ ಪಾಸ್ ವ್ಯವಸ್ಥೆ ಜಾರಿಗೆ ತಂದು ಒಬ್ಬ ರೋಗಿಗೆ ಎರಡು ಪಾಸ್ ನೀಡುತ್ತಿದ್ದೆವು, ಆದರೆ ಸಂಬಂಧಿಕರು ಪಾಸ್ ನಕಲು ಮಾಡಿ ಹತ್ತಾರು ಜನ ಒಳಬರಲಾರಂಭಿಸಿದರು. ಸದ್ಯ ಹೆಚ್ಚುವರಿ ಸೆಕ್ಯುರಿಟಿ ಗಾರ್ಡ್ ನೇಮಕ ಮಾಡಲಾಗಿದ್ದು, ಇನ್ನೂ ಏಳೆಂಟು ಸಿಬ್ಬಂದಿ ನೇಮಕಾತಿಗೆ ನಿರ್ದೇಶಕರು ಸೂಚಿಸಿದ್ದಾರೆ. ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ದೂರು ನೀಡಿದರೆ ಸಭೆ ನಡೆಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
#HaveriDistrictHospital #SecurityLapse #HaveriNews #HospitalTheft #WomenSafety #CCTVCaught #KarnatakaPolice #Haveri #KarnatakaNews #UdayakalaNews

