224 ಕ್ಷೇತ್ರಗಳಲ್ಲಿ ಜಯಂತಿ ಆಚರಣೆಗೆ ತಲಾ ಒಂದು ಲಕ್ಷ ರೂ., ಬೆಂಗಳೂರಿನ 369 ವಾರ್ಡ್‌ಗಳಲ್ಲಿ ಕಾರ್ಯಕ್ರಮ ನಡೆಸಲು ತಲಾ ಒಂದು ಲಕ್ಷ ರೂ. ಅನುದಾನ ನೀಡಲಾಗುವುದು. ಬೆಂಗಳೂರು ಕೆಂಪೇಗೌಡ ಬಡಾವಣೆಯಲ್ಲಿ ಈ ಬಾರಿಯ ಕೆಂಪೇಗೌಡ ಜಯಂತಿ ಆಚರಿಸಲಾಗುವುದು, ಬಿಡಿಎ ವತಿಯಿಂದ 15 ಲಕ್ಷ ಗಿಡ ನೆಡುವ ಕಾರ್ಯಕ್ರಮ ಇದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಬಡಾವಣೆಯಲ್ಲಿ ಜೂನ್ 27ರಂದು ಬೆಳಗ್ಗೆ 11.30ಕ್ಕೆ ನಾಡಪ್ರಭು ಕೆಂಪೇಗೌಡ ಜಯಂತಿ ನಡೆಸಲು ತೀರ್ಮಾನಿಸಲಾಗಿದೆ. ಬಿಡಿಎ ವತಿಯಿಂದ ಅಧ್ಯಕ್ಷ ಹ್ಯಾರೀಸ್ ನೇತೃತ್ವದಲ್ಲಿ ನಗರದಲ್ಲಿ 15 ಲಕ್ಷ ಗಿಡಗಳನ್ನು ನೆಡಲಾಗುವುದು. ಈ ಬಡಾವಣೆಯಲ್ಲಿ ನೂತನ ರಸ್ತೆ ಉದ್ಘಾಟಿಸಲಾಗುವುದು ಎಂದು ಮಾಹಿತಿ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಪೂರ್ವಭಾವಿ ಸಭೆ ಬಳಿಕ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಕಾರ್ಯಕ್ರಮದ ರೂಪುರೇಷೆ ಬಗ್ಗೆ ಎಲ್ಲಾ ಸಂಘಟನೆಗಳ ಜತೆ ಚರ್ಚೆ ಮಾಡಲಾಗಿದೆ. ನಗರದ ನಾಲ್ಕು ಕೆಂಪೇಗೌಡ ಗೋಪುರಗಳಿಂದ ಪ್ರತ್ಯೇಕ ತಂಡಗಳು ಆಗಮಿಸಲಿವೆ. ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಕೆಜೆ ಜಾರ್ಜ್ ಹಾಗೂ ಬೈರತಿ ಸುರೇಶ್ ಈ ಗೋಪುರಗಳ ಜವಾಬ್ದಾರಿ ವಹಿಸಲಿದ್ದಾರೆ. ಮಾಗಡಿ ತಂಡವನ್ನು ಸ್ಥಳೀಯ ಶಾಸಕ ಬಾಲಕೃಷ್ಣ, ಹುಲಿಯೂರು ದುರ್ಗ ಕಡೆಯಿಂದ ರಂಗನಾಥ್ ಮುನ್ನಡೆಸಲಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕಾರ್ಯಕ್ರಮವನ್ನು ಸಚಿವಕೆ.ಹೆಚ್ ಮುನಿಯಪ್ಪ ನಡೆಸುವರು, ಕೃಷ್ಣಬೈರೇಗೌಡ ಅವರ ನೇತೃತ್ವದಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ತಯಾರಿ ಮಾಡಲಾಗುವುದು ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ನಿರ್ಮಿಸಲು ತೀರ್ಮಾನಿಸಿ ಸಿದ್ಧತೆ ನಡೆಸಲಾಗುತ್ತಿದೆ. ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಥೀಮ್ ಪಾರ್ಕ್ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಮುಕ್ತಗೊಳಿಸಲು ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ತಯಾರಿ ಮಾಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಗಣ್ಯರು, ಸ್ವಾಮೀಜಿಗಳು ಹಾಗೂ ನಾಯಕರ ಆಹ್ವಾನದ ಜವಾಬ್ದಾರಿಯನ್ನು ಕೃಷ್ಣ ಬೈರೇಗೌಡ ವಹಿಸಿಕೊಂಡಿದ್ದಾರೆ. ಸಂಘಟನೆಗಳು ಹಾಗೂ ಒಕ್ಕಲಿಗರ ಸಂಘ ಜವಾಬ್ದಾರಿ ಹೊತ್ತುಕೊಂಡಿವೆ. ಈ ಕಾರ್ಯಕ್ರಮ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ. ಕೆಂಪೇಗೌಡರು ಬೆಂಗಳೂರು ನಗರ ಹಾಗೂ ರಾಜ್ಯದ ಆಸ್ತಿ. ಎಲ್ಲಾ ಧರ್ಮ, ಜಾತಿ, ಸಂಘಟನೆಯವರು ಸೇರಿ ಜಯಂತಿ ಆಚರಿಸಲಾಗುವುದು ಎಂದರು.
ಕೆಂಪೇಗೌಡ ಸಮಾಧಿ ಸ್ಥಳವನ್ನು 10 ಎಕರೆ ಜಾಗದಲ್ಲಿ ಅಭಿವೃದ್ಧಿ ಪಡಿಸಬೇಕು. ಕೆಂಪೇಗೌಡರ ಕೋಟೆ ಅಭಿವೃದ್ಧಿಗೆ 100 ಕೋಟಿ ರೂ. ವೆಚ್ಚದ ಟೆಂಡರ್ ಆಗಿದ್ದು, ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಜಿಬಿಎ ವ್ಯಾಪ್ತಿಯಲ್ಲಿ ಕೆಂಪೇಗೌಡ ಪ್ರಶಸ್ತಿ ಆಯ್ಕೆ ಸಮಿತಿ ರಚಿಸಬೇಕು ಎಂಬ ವಿಚಾರಗಳು ಚರ್ಚೆಯಾದವು.
ನಾಡಪ್ರಭು ಕೆಂಪೇಗೌಡ ಅವರನ್ನು ಬೆಂಗಳೂರಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ, ಎಲ್ಲಾ ಜಿಲ್ಲೆಗಳಲ್ಲಿ ಕೆಂಪೇಗೌಡ ಜಿಲ್ಲಾ ಭವನ ನಿರ್ಮಾಣ, ಕೆಂಪೇಗೌಡರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಉದ್ಯಾನವನ ಹಾಗೂ ಅಂತಾರಾಷ್ಟ್ರೀಯ ಸಮುದಾಯ ಭವನ ನಿರ್ಮಾಣ, ಕೆಂಪೇಗೌಡರ ವಸ್ತುಸಂಗ್ರಹಾಲಯ, ಕೆಂಪೇಗೌಡರ ಸ್ಮರಣೆಯಲ್ಲಿ ಬೆಂಗಳೂರಿನ ಕೆರೆಗಳ ಶುದ್ಧೀಕರಣ, ಪುನಶ್ಚೇತನ, ಸ್ವಾಮಿನಾಥನ್ ವರದಿ ಆಧರಿಸಿ ಜಲ ನಿರ್ವಹಣೆ ಬಗ್ಗೆ ಬೆಂಗಳೂರಿಗರಿಗೆ ಜಾಗೃತಿ ಮೂಡಿಸಲು ಕಾರ್ಯಾಗಾರ, ಪಠ್ಯಪುಸ್ತಕದಲ್ಲಿ ಕೆಂಪೇಗೌಡರ ಜೀವನ ಚರಿತ್ರೆ, ಕೆಂಪೇಗೌಡ ಜಯಂತಿಯಂದು ಸರ್ಕಾರಿ ರಜೆ ಘೋಷಣೆ, ನಗರದ ನಾಲ್ಕು ದಿಕ್ಕಿನಲ್ಲಿ 50-60 ಅಡಿ ಎತ್ತರದ ಕೆಂಪೇಗೌಡರ ಕಲ್ಲಿನ ಪ್ರತಿಮೆ ನಿರ್ಮಾಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವತಿ ಗ್ರಾಮ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳು ಸಭೆಯಲ್ಲಿ ಚರ್ಚೆಯಾಗಿವೆ.


