ಅನುಮತಿಯಿಲ್ಲದೆ ವ್ಯಕ್ತಿಗಳ ಖಾಸಗಿ ವೀಡಿಯೊ ಮತ್ತು ಫೋಟೊ ಪ್ರಕಟ ಅಥವಾ ಪ್ರಸಾರ ಮಾಡುವ ಪ್ರಕರಣಗಳಲ್ಲಿ ಪೊಲೀಸರು ಅನುಸರಿಸಬೇಕಾದ ಕ್ರಮಗಳ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಪಾಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ ಐಜಿಪಿ) ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೂರುಗಳನ್ನು ದಾಖಲಿಸುವಲ್ಲಿ ವಿಳಂಬ ಅಥವಾ ನಿರಾಕರಣೆ ನಡೆದಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ, ಈ ಆದೇಶದಲ್ಲಿ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರೆ ಪ್ರಸಾರಕ್ಕೂ ಒಪ್ಪಿಗೆ ನೀಡಿದಂತೆ ಅಲ್ಲ ಎಂಬ ಎಂಬುದನ್ನು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಒಬ್ಬ ವ್ಯಕ್ತಿ ಚಿತ್ರ ಸೆರೆಹಿಡಿಯಲು ಒಪ್ಪಿಗೆ ನೀಡಿದ್ದರೂ ಅದನ್ನು ಹಂಚಲು ಅಥವಾ ಪ್ರಸಾರ ಮಾಡಲು ಒಪ್ಪಿಗೆ ನೀಡದಿದ್ದರೆ ಅದು ಕಾಗ್ನಿಜೆನ್ಸ್ ಅಪರಾಧವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 77ರಂತೆ ಗೌಪ್ಯತೆ ಉಲ್ಲಂಘನೆಗೆ ಸಂಬಂಧಿಸಿದ ವಿಧಿಗಳು, ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 66(ಇ), 67 ಮತ್ತು 67(ಎ)ಗಳನ್ನು ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಮಹಿಳಾ ಸಂತ್ರಸ್ತರಿದ್ದಲ್ಲಿ 77ರ ವಿಧಿಯ ಜೊತೆಗೆ ಐಟಿ ಕಾಯ್ದೆಯ ಸೆಕ್ಷನ್ ಗಳನ್ನು ಸೇರಿಸಿ ಎಫ್‌ಐಆರ್ ಕಡ್ಡಾಯವಾಗಿ ನೋಂದಣಿ ಮಾಡಬೇಕೆಂದು ನಿರ್ದೇಶಿಸಲಾಗಿದೆ.
ಬ್ಲಾಕ್‌ಮೇಲ್ ವೀಡಿಯೊಗಳು, ಸೆಕ್ಸ್ಟೋರ್ಷನ್, ರಿವೆಂಜ್ ಪೋರ್ನೋಗ್ರಫಿ ಮುಂತಾದ ಪ್ರಕರಣಗಳಲ್ಲಿ ತಕ್ಷಣ ಎಫ್‌ಐಆರ್ ದಾಖಲಿಸಬೇಕು. ಪೀಡಿತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ದೂರು ನಿರಾಕರಿಸಬಾರದು. ಅಪರಾಧ ಸ್ಥಳೀಯ ವ್ಯಾಪ್ತಿಯ ಹೊರಗೆ ನಡೆದಿದ್ದರೆ ಝೀರೋ ಎಫ್‌ಐಆರ್ ದಾಖಲಿಸಿ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು ಎಂದು ತಿಳಿಸಲಾಗಿದೆ.
ಅಪರಾಧ ವಿಷಯವನ್ನು ತಕ್ಷಣ ತೆಗೆದುಹಾಕಲು ಐಟಿ ನಿಯಮಗಳ ಪ್ರಕಾರ ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ನೀಡಬೇಕು ಮತ್ತು ಎಲ್ಲ ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂರಕ್ಷಿಸಬೇಕು. ಪೀಡಿತರ ಗುರುತು ಗೌಪ್ಯವಾಗಿರಬೇಕು, ಮಹಿಳಾ ಸಂತ್ರಸ್ತೆಯ ದೂರುಗಳನ್ನು ಮಹಿಳಾ ಅಧಿಕಾರಿಗಳು ದಾಖಲಿಸುವಂತೆ ಸೂಚಿಸಲಾಗಿದೆ.
ತನಿಖಾಧಿಕಾರಿಗಳು ಸೈಬರ್ ಕ್ರೈಂ ಘಟಕಗಳೊಂದಿಗೆ ಸಮನ್ವಯತೆ ಸಾಧಿಸಿ ತಾಂತ್ರಿಕ ತನಿಖೆ ಹಾಗೂ ಫೋರೆನ್ಸಿಕ್ ವಿಶ್ಲೇಷಣೆ ನಡೆಸಬೇಕು. ಎಫ್‌ಐಆರ್ ನೋಂದಣಿ ಮಾಡದಿರುವುದು ಅಥವಾ ಪೂರ್ವಾನುಮತಿ ಎಂಬ ತಪ್ಪು ಕಾರಣದಿಂದ ವಿಳಂಬ ಮಾಡಿದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಆದೇಶದಲ್ಲಿ ಎಚ್ಚರಿಸಿದ್ದಾರೆ.


