Friday, September 18, 2026
Menu

ನೀಟ್‌-ಯುಜಿ ಪರೀಕ್ಷೆ: ಎನ್‌ಟಿಎ ಕಚೇರಿ ಖುದ್ದು ಪರಿಶೀಲನೆಗೆ ಮುಂದಾದ ಸುಪ್ರೀಂ

supreme court

ನೀಟ್‌-ಯುಜಿ ಪರೀಕ್ಷೆಗಳಲ್ಲಿನ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಆಡಳಿತ ವೈಖರಿ ಮತ್ತು ಪರೀಕ್ಷಾ ಸುರಕ್ಷತೆಯ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್‌ ಚಿಂತನೆ ನಡೆಸಿದೆ.

ಎನ್‌ಟಿಎಯಲ್ಲಿ ಮೂಲಭೂತ ಸುಧಾರಣೆ ತರುವ ನಿಟ್ಟಿನಲ್ಲಿ ಇನ್ಫೋಸಿಸ್‌ ಸಹ ಸಂಸ್ಥಾಪಕ ನಂದನ್‌ ನೀಲೇಕಣಿ ನೇತೃತ್ವದ ಉನ್ನತಮಟ್ಟದ ಸಮಿತಿಗೆ ಸುಧಾರಣಾ ಪ್ರಕ್ರಿಯೆಯಲ್ಲಿ ಆಗಿರುವ ಪ್ರಗತಿಯ ಪ್ರಮಾಣ ಪತ್ರ ಸಲ್ಲಿಸುವಂತೆ  ನ್ಯಾಯಪೀಠ ನಿರ್ದೇಶಿಸಿದೆ.

ಎನ್‌ಟಿಎ ಪರೀಕ್ಷೆಗಳನ್ನು ನಡೆಸುವ ವಿಧಾನ, ತಂತ್ರಜ್ಞಾನ ವ್ಯವಸ್ಥೆ ಮತ್ತು ದತ್ತಾಂಶ ಭದ್ರತೆಯ ನೈಜ ಸ್ಥಿತಿಯನ್ನು ಪರಿಶೀಲಿಸಲು ತನಿಖಾಧಿಕಾರಿಗಳು ಹಾಗೂ ನ್ಯಾಯಪೀಠದ ಪ್ರತಿನಿಧಿಗಳು ಕಚೇರಿಗೆ ನೇರವಾಗಿ ಭೇಟಿ ನೀಡುವ ಕುರಿತು ಸುಪ್ರೀಂ ಕೋರ್ಟ್ ಮುಂದಾಗಿದೆ.

ಪರೀಕ್ಷೆಯ ಸುಧಾರಣೆಗಳನ್ನು ನಿಜವಾಗಿಯೂ ಅನುಷ್ಠಾನಗೊಳಿಸಲಾಗಿದೆಯೇ ಎಂದು ನೋಡಲು ನ್ಯಾಯಮೂರ್ತಿಗಳಾದ ಪಿಎಸ್​ ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ಎನ್​ಟಿಎ ಕಚೇರಿಗೆ ವೈಯಕ್ತಿಕವಾಗಿ ಭೇಟಿ ನೀಡುವ ಸಾಧ್ಯತೆಯಿದೆ. ವಿಚಾರಣೆಯ ಸಮಯದಲ್ಲಿ ಪರೀಕ್ಷೆಯನ್ನು ನಡೆಸಲು ವಿನ್ಯಾಸಗೊಳಿಸಲಾದ ವ್ಯವಸ್ಥೆಯು ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ, ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಮತ್ತು ಅದಕ್ಕೆ ಸಾಕಷ್ಟು ಅಗತ್ಯ ವ್ಯವಸ್ಥೆಗಳು ಲಭ್ಯವಿದೆಯೇ ಎಂದು ನೋಡಲು ಬಯಸುವುದಾಗಿ ನ್ಯಾಯಪೀಠ ಹೇಳಿದೆ.

ತಾಂತ್ರಿಕ ಹಾಗೂ ಕಾರ್ಯಾಚರಣೆಯ ಸುಧಾರಣೆಗಾಗಿ ರಚಿಸಲಾದ ನಂದನ್ ನಿಲೇಕಣಿ ಸಮಿತಿಯು, ಪರೀಕ್ಷಾ ಭದ್ರತೆಯನ್ನು ಬಲಪಡಿಸಲು ಕೈಗೊಂಡಿರುವ ಕ್ರಮಗಳ ವಿವರವಾದ ಪ್ರಗತಿ ವರದಿಯನ್ನು ಸಲ್ಲಿಸಲು ಕೋರ್ಟ್ ಸೂಚಿಸಿದೆ. ಶಿಫಾರಸುಗಳು ವರದಿಗೆ ಸೀಮಿತವಾಗಿರಬಾರದು, ಅನುಷ್ಠಾನಕ್ಕೂ ತರಬೇಕು. ಮುಂದಿನ ವರ್ಷದ ನೀಟ್-ಯುಜಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳು ಆರಂಭವಾಗುವ ಮೊದಲೇ ಎಲ್ಲಾ ಡಿಜಿಟಲ್ ಹಾಗೂ ಭದ್ರತಾ ಸುಧಾರಣೆಗಳು ಸಂಪೂರ್ಣವಾಗಿ ಜಾರಿಗೆ ಬರಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

Related Posts

Leave a Reply

Your email address will not be published. Required fields are marked *