Friday, September 18, 2026
Menu

ಪ್ರತಿ ಲೀಟರ್‌ ಹಾಲಿಗೆ 8 ರೂ. ಹೆಚ್ಚಿಸಲು ಉತ್ಪಾದಕರ ಆಗ್ರಹ

nandini milk

ರಾಜ್ಯದಲ್ಲಿ ಹಾಲು ಉತ್ಪಾದಕರ ಸಂಘಗಳು ಪ್ರತಿ ಲೀಟರ್‌ಗೆ ಎಂಟು ರೂಪಾಯಿ ದರ ಹೆಚ್ಚಳಕ್ಕೆ ಆಗ್ರಹಿಸಿವೆ. ಬಮೂಲ್‌, ಚಮೂಲ್‌, ಮಂಡ್ಯ ಮಿಲ್ಕ್‌, ತುಮಕೂರು ಸೇರಿದಂತೆ ಹಲವು ಹಾಲು ಉತ್ಪಾದಕರ ಒಕ್ಕೂಟಗಳು ದರ ಹೆಚ್ಚಳ ಬೇಡಿಕೆ ಮುಂದಿಟ್ಟಿವೆ.

ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟವು ಬೆಂಗಳೂರಿನಲ್ಲಿ ಸುದ್ದಿ ಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿ, ದರ ಹೆಚ್ಚಳ ಆಗ್ರಹಕ್ಕೆ ಕಾರಣ ವಿವರಿಸಿದೆ. ಬಮೂಲ್ ಹಾಲು ಒಕ್ಕೂಟದ ಅಧ್ಯಕ್ಷ ನಾಗರಾಜ್, ಎಂಟು ತಿಂಗಳಿನಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಪ್ರಯೋಜನವಾಗಿಲ್ಲ. ಪ್ರತಿದಿನ 3 ರಿಂದ 5 ಲಕ್ಷ ಲೀಟರ್ ಹಾಲು ಉತ್ಪಾದನೆ ಕುಂಠಿತವಾಗುತ್ತಿದೆ. ಪ್ರತಿ ಲೀಟರ್‌ಗೆ ಪ್ರೋತ್ಸಾಹ ಧನವನ್ನು 5 ರಿಂದ 8 ರುಪಾಯಿಗೆ ಹೆಚ್ಚಿಸಬೇಕು. ಮಾರುಕಟ್ಟೆ ದರ 8 ರೂಪಾಯಿ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರ ಹಾಲಿನ ದರ ಹೆಚ್ಚಿಸದಿದ್ದರೆ ವಿಧಾನಸೌಧ ಚಲೋ ಮಾಡುತ್ತೇವೆ. ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡುತ್ತೇವೆ. ಮೂರು ದಿನಗಳಲ್ಲಿ ಕ್ಯಾಬಿನೆಟ್ ಸಭೆ ಕರೆದು ನಿರ್ಣಯ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಶೇಕಡಾ 70ರಷ್ಟು ಮಳೆ ಕೊರತೆ, ಹುಲ್ಲಿನ ಕೊರತೆ ಉಂಟಾಗಿದೆ. ಪಶು ಆಹಾರದ ಕಚ್ಚಾ ಸಾಮಗ್ರಿಗಳಾದ ಮೆಕ್ಕೆಜೋಳ, ಇಂಡಿ ಬೂಸಾ, ಕಾಕಂಬಿ ಮುಂತಾದವುಗಳ ದರ ಶೇಕಡಾ 25ರಷ್ಟು ಏರಿಕೆಯಾಗಿದೆ. ರಾಸುಗಳಿಗೆ ಬಳಸುವ ನೆಲಹಾಸು ದರವೂ ಹೆಚ್ಚಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ದರಗಳು ಏರಿಕೆಯಾಗಿವೆ. ಇವೆಲ್ಲವೂ ಹಾಲು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿವೆ ಎಂದು ಅವರು ತಿಳಿಸಿದ್ದಾರೆ.

ಹಿಂದೆ ರಾಜ್ಯದಲ್ಲಿ ಪ್ರತಿದಿನ 1 ಕೋಟಿ 11 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಈಗ 1 ಕೋಟಿ 5 ಲಕ್ಷದಿಂದ 6 ಲಕ್ಷ ಲೀಟರ್‌ಗೆ ಇಳಿದಿದೆ. ರೈತರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಜವಾಬ್ದಾರಿ, ಇತರ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚು ಇದೆ. ಕರ್ನಾಟಕದಲ್ಲಿ ಮಾತ್ರ ಕಡಿಮೆ. ಉತ್ಪಾದನಾ ವೆಚ್ಚ ಹೆಚ್ಚಾದರೂ ಬೆಲೆ ಹೆಚ್ಚದಿದ್ದರೆ ರೈತರು ಹಾಲು ಉತ್ಪಾದನೆಯನ್ನು ಕಡಿಮೆ ಮಾಡುತ್ತಾರೆ. ರಾಜ್ಯದಲ್ಲಿ ಹಾಲಿನ ಕೊರತೆ ಉಂಟಾಗಬಹುದು. ಸರ್ಕಾರ ಈ ಬೇಡಿಕೆಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *